February 16, 2026
Monday, February 16, 2026
spot_img

ಭಾರತದ ಮೊದಲ ಖಾಸಗಿ ಮಿನಿ ಹೆಲಿಕಾಪ್ಟರ್ ಅಸೆಂಬ್ಲಿ ಲೈನ್ ಈಗ ಕರ್ನಾಟಕದಲ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ರಕ್ಷಣಾ ಮತ್ತು ವಾಯುಯಾನ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ಕೋಲಾರ ಜಿಲ್ಲೆಯ ವೇಮಗಲ್ ಸಜ್ಜಾಗಿದೆ. ದೇಶದ ಮೊಟ್ಟಮೊದಲ ಖಾಸಗಿ ವಲಯದ ಮಿನಿ ಹೆಲಿಕಾಪ್ಟರ್ ನಿರ್ಮಾಣ ಘಟಕವು ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡುತ್ತಿದ್ದು, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ವರ್ಚುವಲ್ ಆಗಿ ಈ ಘಟಕಕ್ಕೆ ಚಾಲನೆ ನೀಡಲಿದ್ದಾರೆ.

ಟಾಟಾ ಸಮೂಹವು ಜಾಗತಿಕ ವಿಮಾನ ತಯಾರಿಕಾ ಸಂಸ್ಥೆ ಏರ್‌ಬಸ್‌ನೊಂದಿಗೆ ಕೈಜೋಡಿಸಿ ಈ ಘಟಕವನ್ನು ಸ್ಥಾಪಿಸಿದೆ. ಇಲ್ಲಿ ವಿಶ್ವದರ್ಜೆಯ H125 ಮಾದರಿಯ ಮಿನಿ ಹೆಲಿಕಾಪ್ಟರ್‌ಗಳ ಜೋಡಣೆ ನಡೆಯಲಿದೆ.

ಸುಮಾರು 16 ಎಕರೆ ಪ್ರದೇಶದಲ್ಲಿ ಹರಡಿರುವ ಈ ಘಟಕವು ವರ್ಷಕ್ಕೆ 10 ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವ ಗುರಿ ಹೊಂದಿದೆ. 2027ರ ವೇಳೆಗೆ ಮೊದಲ ಹೆಲಿಕಾಪ್ಟರ್ ಹೊರಬರುವ ನಿರೀಕ್ಷೆಯಿದೆ.

ದೇವನಹಳ್ಳಿ ವಿಮಾನ ನಿಲ್ದಾಣ ಹಾಗೂ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಹತ್ತಿರವಿರುವ ಕಾರಣ ವೇಮಗಲ್ ಅನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ರಕ್ಷಣಾ ಬಲ: ಇದೇ ಸಂದರ್ಭದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ‘ಹಮ್ಮರ್’ ಕ್ಷಿಪಣಿಗಳನ್ನು ಭಾರತದಲ್ಲೇ ಅಭಿವೃದ್ಧಿಪಡಿಸುವ ಐತಿಹಾಸಿಕ ಒಪ್ಪಂದಕ್ಕೂ ಉಭಯ ನಾಯಕರು ಸಹಿ ಹಾಕಲಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಲಿದ್ದು, ಕೋಲಾರ ಈಗ ಜಾಗತಿಕ ರಕ್ಷಣಾ ಭೂಪಟದಲ್ಲಿ ಮಿಂಚಲು ಸಿದ್ಧವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !