ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಜಂಟಿಯಾಗಿ ನಿವೇಶನ ಹೊಂದಿರುವ ಕುಟುಂಬಗಳು ಹಾಗೂ ಇತರ ಆಸ್ತಿ ಮಾಲೀಕರಿಗೆ ಅನುಕೂಲವಾಗುವ ಮಹತ್ವದ ಸೇವೆಯೊಂದು ಜಾರಿಗೆ ಬಂದಿದೆ. ಜಂಟಿ ಎ-ಇಖಾತಾ ಹೊಂದಿರುವವರು ತಮ್ಮ ಆಸ್ತಿಯನ್ನು ವಿಭಾಗಿಸಿಕೊಂಡು ಪ್ರತ್ಯೇಕ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸುವ ಆನ್ಲೈನ್ ಸೌಲಭ್ಯವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಅದರ ವ್ಯಾಪ್ತಿಯ ಐದು ನಗರ ಪಾಲಿಕೆಗಳು ಆರಂಭಿಸಿವೆ.
ಏನಿದು ಹೊಸ ಸೌಲಭ್ಯ?
ಇದುವರೆಗೆ ಒಂದೇ ಖಾತಾದಲ್ಲಿ ಹಲವು ಮಂದಿ ಹೆಸರಿನಲ್ಲಿ ಆಸ್ತಿ ಇದ್ದಾಗ ಮಾರಾಟ, ದಾನಪತ್ರ, ಸಾಲಕ್ಕಾಗಿ ಅಡಮಾನ, ಕಟ್ಟಡ ನಕ್ಷೆ ಅನುಮೋದನೆ ಹಾಗೂ ಆಸ್ತಿ ತೆರಿಗೆ ಪಾವತಿಸುವಂತಹ ಕೆಲಸಗಳಲ್ಲಿ ತೊಂದರೆ ಎದುರಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶದಿಂದ ಇ-ಆಸ್ತಿ 2.0 ಪೋರ್ಟಲ್ನಲ್ಲಿ ಹೊಸ ಸೇವೆ ಪರಿಚಯಿಸಲಾಗಿದೆ.
ಇದನ್ನೂ ಓದಿ:
ಜಂಟಿ ಎ-ಇಖಾತಾದಲ್ಲಿ ಪ್ರತಿಯೊಬ್ಬರ ಪಾಲು ಸ್ಪಷ್ಟವಾಗಿ ದಾಖಲಾಗಿದ್ದರೆ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರತ್ಯೇಕ ಎ-ಇಖಾತಾ ಪಡೆಯಬಹುದು. ಕುಟುಂಬ ಸದಸ್ಯರು, ವಾರಸುದಾರರು, ಸಂಬಂಧಿಕರು ಹಾಗೂ ಕುಟುಂಬಕ್ಕೆ ಸೇರದ ಜಂಟಿ ಮಾಲೀಕರಿಗೂ ಈ ಅವಕಾಶ ಅನ್ವಯಿಸುತ್ತದೆ.
ಯಾವ ಆಸ್ತಿಗಳಿಗೆ ಅನ್ವಯ?
ಖಾಲಿ ನಿವೇಶನಗಳು ಹಾಗೂ 2,000 ಚದರ ಮೀಟರ್ವರೆಗಿನ ಕಟ್ಟಡವಿರುವ ನಿವೇಶನಗಳಿಗೆ ಈ ಸೌಲಭ್ಯ ಲಭ್ಯ. ಬಹುಮಹಡಿ ಅಪಾರ್ಟ್ಮೆಂಟ್ಗಳ ಪ್ರತ್ಯೇಕ ಘಟಕಗಳಿಗೆ ಇದು ಅನ್ವಯಿಸುವುದಿಲ್ಲ. 2,000 ಚದರ ಮೀಟರ್ಗಿಂತ ದೊಡ್ಡ ನಿವೇಶನಗಳು ಹಳೆಯ ನಗರ ಯೋಜನಾ ಅನುಮೋದನಾ ಪ್ರಕ್ರಿಯೆಯನ್ನೇ ಅನುಸರಿಸಬೇಕು.
ವಿಭಜನೆಯಿಂದ ಸೃಷ್ಟಿಯಾಗುವ ಪ್ರತಿಯೊಂದು ನಿವೇಶನ ಕನಿಷ್ಠ 50 ಚದರ ಮೀಟರ್ ವಿಸ್ತೀರ್ಣ ಹೊಂದಿರಬೇಕು. ರಸ್ತೆಗೆ ಕನಿಷ್ಠ ಆರು ಮೀಟರ್ ಮುಂಭಾಗ ಇರಬೇಕು ಮತ್ತು ಸಾರ್ವಜನಿಕ ರಸ್ತೆಗೆ ಸ್ವತಂತ್ರ ಪ್ರವೇಶದ ವ್ಯವಸ್ಥೆಯೂ ಕಡ್ಡಾಯ. ಅಗತ್ಯವಿದ್ದರೆ ಒಳರಸ್ತೆಯ ಅಗಲ ಕನಿಷ್ಠ 3.5 ಮೀಟರ್ ಇರಬೇಕು.
ಅರ್ಜಿ ಮತ್ತು ಶುಲ್ಕದ ವಿವರ
ನೋಂದಾಯಿತ ವಾಸ್ತುಶಿಲ್ಪಿ ಸಿದ್ಧಪಡಿಸಿದ ನಿವೇಶನ ವಿಭಜನೆಯ ನಕ್ಷೆಯನ್ನು ಅಪ್ಲೋಡ್ ಮಾಡಬೇಕು. ಶುಲ್ಕವು ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇಕಡಾವಾರು ಆಧಾರದಲ್ಲಿರುತ್ತದೆ. ವಸತಿ ಆಸ್ತಿಗೆ ಶೇ. 0.2 ಹಾಗೂ ವಾಣಿಜ್ಯೇತರವಲ್ಲದ ಇತರ ಆಸ್ತಿಗಳಿಗೆ ಶೇ. 0.5 ಶುಲ್ಕ ನಿಗದಿಯಾಗಿದೆ. ಉದಾಹರಣೆಗೆ, ಒಂದು ಕೋಟಿ ರೂ. ಮಾರ್ಗಸೂಚಿ ಮೌಲ್ಯದ ವಸತಿ ಆಸ್ತಿಗೆ 20,000 ರೂ. ಶುಲ್ಕವಾಗುತ್ತದೆ.



