February 16, 2026
Monday, February 16, 2026
spot_img

ಯುದ್ದ ನಿಲ್ಲಿಸಲು ನಾವು ರೆಡಿ, ಆದ್ರೆ…ಉಕ್ರೇನ್‌ ಮುಂದೆ ರಷ್ಯಾ ಹಾಕಿದ ಕಂಡಿಷನ್‌ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಹಾಗೂ ಉಕ್ರೇನ್‌ ನಡುವೆ ಯುದ್ದ ಆರಂಭವಾಗಿ 4 ವರ್ಷಗಳು ಆಗುತ್ತಾ ಬಂದಿದೆ. ಈ ನಡುವೆ ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳು ಶಾಂತಿ ಮಾತುಕತೆ ನಡೆಸುತ್ತಿದೆ. ಹೀಗಿರುವಾಗಲೇ ರಷ್ಯಾ ಯುದ್ದ ನಿಲ್ಲುಸುವುದಾಗಿ ಹೇಳಿದ್ದು, ಆದ್ರೆ ಒಂದು ಕಂಡಿಷನ್‌ ಹಾಕಿದೆ.

ರಷ್ಯಾ ಕೊನೆಗೂ ಯುದ್ದ ನಿಲ್ಲಿಸುವುದಾಗಿ ಹೇಳಿದೆ. ಆದ್ರೆ, ಉಕ್ರೇನ್‌ ನಲ್ಲಿ ಚುನಾವಣೆ ನಡೆಯಬೇಕು ಎಂಬ ಬೇಡಿಕೆಯನ್ನು ಇಟ್ಟಿದೆ. ಅಲ್ಲದೆ, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ನಾಯಕತ್ವ ಅಕ್ರಮವಾಗಿದ್ದು, ರಷ್ಯಾ ಈ ಸರ್ಕಾರವನ್ನು ಗುರುತಿಸುವುದಿಲ್ಲ ಎಂದು ಪುನರುಚ್ಚರಿಸಿದೆ.

ಈ ಕುರಿತು ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ರಷ್ಯಾದ ಉಪ ವಿದೇಶಾಂಗ ಸಚಿವ ಮಿಖಾಯಿಲ್ ಗಲುಜಿನ್, ಉಕ್ರೇನ್‌ ನ ನಾಯಕತ್ವ ನ್ಯಾಯಸಮ್ಮತವಾಗಿಲ್ಲ. ಹಾಗಾಗಿ ಈ ಕುರಿತಂತೆ ಉಕ್ರೇನ್‌ ನಲ್ಲಿ ತಾತ್ಕಾಲಿಕವಾಗಿ ಬಾಹ್ಯ ಆಡಳಿತವನ್ನು ನಿರ್ಮಿಸಬೇಕೆಂದು ವ್ಲಾಡಿಮಿರ್‌ ಪುಟಿನ್‌ ವಿಶ್ವಸಂಸ್ಥೆಗೆ ಮಾರ್ಚ್‌ 2025ರಲ್ಲಿ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಉಕ್ರೇನ್‌ ಅಧ್ಯಕ್ಷೀಯ ಚುನಾವಣೆಗಳು ನಡೆಸಲು ಮುಂದಾದರೆ, ಆ ದಿನದಂದು ರಷ್ಯಾ ದಾಳಿಗಳನ್ನು ನಡೆಸುವುದನ್ನು ಸ್ಥಗಿತಗೊಳಿಸುತ್ತದೆ. ಉಕ್ರೇನ್‌ ನಲ್ಲಿ ಚುನಾವಣೆಗಳು ನಡೆದರೆ ದಾಳಿಗಳನ್ನು ಸ್ಥಗಿತಗೊಳಿಸುವುದಾಗಿ ಪುಟಿನ್‌ ಈಗಾಗಲೇ ಸೂಚಿಸಿದ್ದಾರೆ. ಆದಾಗ್ಯೂ, ಉಕ್ರೇನ್‌ ಸದ್ಯ ಯಾವುದೇ ಪ್ರಾಯೋಗಿಕ ಸಿದ್ದತೆ ನಡೆಸಿಲ್ಲ ಎಂದಿದ್ದಾರೆ.

2024ರಲ್ಲಿ ನಡೆದ ರಷ್ಯಾ ಅಧ್ಯಕ್ಷೀಯ ಚುನಾವಣೆಗಳ ಸಮಯದಲ್ಲಿ ದಾಳಿಗಳ ಹೊರತಾಗಿಯೂ ಯುದ್ದವಲಯಗಳ ಬಳಿ ಮತದಾನ ಕೇಂದ್ರಗಳನ್ನು ತೆರೆಯಲಾಯಿತು. ಆದರೆ, ಉಕ್ರೇನ್‌ ಈ ಚುನಾವಣೆಗಳನ್ನು ಹಾಳು ಮಾಡಲು ಡ್ರೋನ್‌ ದಾಳಿಗಳ ಮೂಲಕ ವಿಫಲ ಪ್ರಯತ್ನ ನಡೆಸಿತ್ತು ಎಂದಿದ್ದಾರೆ.

ಉಕ್ರೇನ್‌ ಆಡಳಿತ ಅಂತಿಮವಾಗಿ ಪ್ರಜಾಪ್ರಭುತ್ವದ ಕಡೆಗೆ ಹೆಜ್ಜೆಹಾಕಲು ನಿರ್ಧರಿಸಿದರೆ, ಉಕ್ರೇನ್‌ ಜನತೆ ತಮ್ಮ ಸಂವಿಧಾನಿಕ ಹಕ್ಕುಗಳನ್ನು ಚಲಾಯಿಸಲು ಮತ್ತು ಅವರ ದೇಶದ ಭವಿಷ್ಯವನ್ನು ನಿರ್ಧರಿಸಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.

ಈ ಹೇಳಿಕೆಗಳು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ರಷ್ಯಾ ಶಾಂತಿ ಒಪ್ಪಂದ ಮಾಡಿಕೊಂಡರೆ ಉಕ್ರೇನ್‌ ಚುನಾವಣೆ ನಡೆಸುತ್ತದೆ ಎಂದಿದ್ದು, ‘ಟ್ರಂಪ್‌ ಅವರು ಪುಟಿನ್‌ ಅವರನ್ನು ಒತ್ತಾಯಿಸಿ ನಮಗೆ ಕದನ ವಿರಾಮ ಕೊಡಿಸಬೇಕು.ಆಗ ನಾವು ನಮ್ಮ ಸಂಸತ್ತು ಕಾನೂನನ್ನು ಬದಲಾಯಿಸಿ ಚುನಾವಣೆ ಮಾಡಬಹುದು’ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !