October 18, 2026
Sunday, October 18, 2026
spot_img

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಭಕ್ತರ ಮೇಲೆ ಹರಿದ ಟ್ರಕ್‌; 12 ಮಂದಿ ಬ*ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಶೀತಲಾ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಗುಂಪಿನ ಮೇಲೆ ನಿಯಂತ್ರಣ ತಪ್ಪಿದ ಟ್ರಕ್ ಹರಿದ ಪರಿಣಾಮ ಕನಿಷ್ಠ 12 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ನಡೆದಿದೆ. ದೇವಸ್ಥಾನದ ಪ್ರವೇಶ ದ್ವಾರ ಮತ್ತು ಹೊರಗೋಡೆಗೂ ಟ್ರಕ್ ಡಿಕ್ಕಿ ಹೊಡೆದು ಹಾನಿಯಾಗಿದೆ.

ತಡೆಗೋಡೆ ಮುರಿದು ನುಗ್ಗಿದ ಟ್ರಕ್

ಭಾನುವಾರ ಬೆಳಗಿನ ಜಾವ ಸುಮಾರು 1.30ರ ವೇಳೆಗೆ ಈ ಘಟನೆ ನಡೆದಿದೆ. ಭತ್ತ ತುಂಬಿಕೊಂಡು ಛಿನೋರ್‌ ಕಡೆಯಿಂದ ಬರುತ್ತಿದ್ದ ಟ್ರಕ್, ಇಳಿಜಾರಿನ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದ ರಸ್ತೆಯಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಮುಂದುವರಿದ ಟ್ರಕ್, ರಸ್ತೆಯಲ್ಲಿದ್ದ ಭಕ್ತರಿಗೆ ಡಿಕ್ಕಿ ಹೊಡೆದು ದೇವಸ್ಥಾನದ ಹೊರಗೋಡೆಗೆ ಅಪ್ಪಳಿಸಿದೆ.

ಆರು ಜನರ ಸ್ಥಿತಿ ಗಂಭೀರ

ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಒಟ್ಟು 39 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಐದರಿಂದ ಆರು ಜನರ ಸ್ಥಿತಿ ಗಂಭೀರವಾಗಿದ್ದು, ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.

ಬ್ಯಾರಿಕೇಡ್‌ ದಾಟಿದ್ದು ಹೇಗೆ? ತನಿಖೆ ಆರಂಭ

ನವರಾತ್ರಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಪೊಲೀಸ್ ತಪಾಸಣಾ ಕೇಂದ್ರ ಹಾಗೂ ತಡೆಗೋಡೆಗಳನ್ನು ಅಳವಡಿಸಲಾಗಿತ್ತು. ಆದರೂ ಟ್ರಕ್ ಅವುಗಳನ್ನು ದಾಟಿ ದೇವಸ್ಥಾನದವರೆಗೆ ತಲುಪಿದ್ದು ಹೇಗೆ ಎಂಬುದರ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ವಾಹನದ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಲು ಪ್ರಾದೇಶಿಕ ಸಾರಿಗೆ ಇಲಾಖೆ (RTO) ತಂಡವನ್ನೂ ನಿಯೋಜಿಸಲಾಗಿದೆ.

Must Read