ಗೌರಿ ಗಣೇಶ ಹಬ್ಬದ ಸಮಯದಲ್ಲಿ ಕೈಗೆ ಹೂವಿನಿಂದ ಕೂಡಿರುವ ಅರಿಶಿನದ ದಾರವನ್ನು ಕಟ್ಟಿಕೊಳ್ಳುವುದು ಸಂಪ್ರದಾಯ. ನಾವು ಈ ದಾರ ಯಾಕೆ ಕಟ್ಟಬೇಕು? ಇಲ್ಲಿದೆ ಮಾಹಿತಿ..
ನಾವು ಗೌರಿ ಗಣೇಶ ಹಬ್ಬದ ಸಮಯದಲ್ಲಿ ಕೈಗೆ ರಕ್ಷೆಯ ರೀತಿ ಕಟ್ಟಿಕೊಳ್ಳುವ ದಾರದ ಹೆಸರು ಷೋಡಶ ಗ್ರಂಥಿ. ಷೋಡಶ ಗ್ರಂಥಿ ಎಂದರೆ ಸ್ವರ್ಣಗೌರಿ ಮತ್ತು ಗಣೇಶನ ಹಬ್ಬವನ್ನು ವ್ರತದ ರೀತಿ 16 ವರ್ಷ ಆಚರಿಸಬೇಕು ಎಂಬುದರ ಗುರುತು. ಈ ದಾರದೊಂದಿಗೆ ನಾವು 16 ವರ್ಷ ಬಿಡದೆ ಈ ವ್ರತ ನೆರವೇರಿಸುತ್ತೇವೆ ಎಂಬ ಸಂಕಲ್ಪ ಸಿದ್ಧವಾಗುತ್ತದೆ. ಹೀಗಾಗಿ ಈ ರೂಢಿ ತಲೆತಲಾಂತರದಿಂದ ಇದೆ.
ಈ ದಾರವನ್ನು ಕಟ್ಟುವ ಸಂದರ್ಭದಲ್ಲಿ ದಾರದಲ್ಲಿ ಒಟ್ಟು 16 ದೇವತೆಗಳ ಸ್ಮರಣೆ ಮಾಡಿ ಸಂಕಲ್ಪ ಮಾಡಿ ಧಾರಣೆ ಮಾಡಬೇಕೆಂಬ ನಿಯಮವಿದೆ. ಸ್ವರ್ಣಗೌರಿ, ಮಹಾಗೌರಿ, ಕಾತ್ಯಾಯಿನಿ ಹೀಗೆ 16 ಪಾರ್ವತಿಯ ಹೆಸರನ್ನು ಸ್ಮರಣೆ ಮಾಡುತ್ತಾ ಕೈಗೆ ಕಟ್ಟಿಕೊಳ್ಳಬೇಕು. ಯುವಕರಿಗೆ ಆಯಸ್ಸು, ಯಶಸ್ಸು, ಅಭಿವೃದ್ಧಿ ದೊರಕಲು ಈ ಪದ್ಧತಿ ಶ್ರೇಯಸ್ಕರ ಎನ್ನುವ ನಂಬಿಕೆಯಿದೆ.