ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ವಿಧಾನಸಭಾ ಚುನಾವಣೆಯತ್ತ ಸಜ್ಜಾಗುತ್ತಿದ್ದು, ಈ ಸಮಯದಲ್ಲಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ನೀಡಿದ ಹೇಳಿಕೆ ಹೊಸ ರಾಜಕೀಯ ಸಂಚಲನ ಮೂಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹಿಮಂತ್ ಬಿಸ್ವಾ ಶರ್ಮಾ,2014ರಲ್ಲಿ ಕಾಂಗ್ರೆಸ್‌ನಲ್ಲಿದ್ದರು. ಆ ಸಮಯದ ವಿಚಾರ ಹೇಳುತ್ತಾ 2014ರಲ್ಲಿ ಸೋನಿಯಾ ಗಾಂಧಿ ನಾನು ಅಸ್ಸಾಂ ಸಿಎಂ ಆಗಬೇಕು ಎಂದು ಬಯಸಿದ್ದರು, ಆದರೆ ರಾಹುಲ್ ಗಾಂಧಿ ಅದಕ್ಕೆ ಅಡ್ಡಗಾಲು ಹಾಕಿದರು ಎಂದು ಹೇಳಿದ್ದಾರೆ. ಈ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
2014 ರಲ್ಲಿ 58 ಕಾಂಗ್ರೆಸ್ ಶಾಸಕರು ತಮ್ಮನ್ನು ಬೆಂಬಲಿಸುತ್ತಿದ್ದಾಗ, ಆಗಿನ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರು ತನಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನಾಂಕವನ್ನು ನಿರ್ಧರಿಸಲು ಕೇಳಿಕೊಂಡಿದ್ದರು. ನಾನು ಕೂಡ ಜೂನ್‌ನಲ್ಲಿ ಕಾಮಾಕ್ಯ ದೇವಸ್ಥಾನದಲ್ಲಿ ನಡೆಯಬೇಕಿದ್ದ ಅಂಬುಬಾಚಿ ಮೇಳದ ಮರುದಿನ ಪ್ರಮಾಣ ವಚನ ಸ್ವೀಕರಿಸುವುದಾಗಿ ಸೋನಿಯಾ ಗಾಂಧಿಯವರಿಗೆ ತಿಳಿಸಿದ್ದೆ. ಆದರೆ, ಆ ಸಮಯದಲ್ಲಿ ಅಮೆರಿಕದಲ್ಲಿದ್ದ ರಾಹುಲ್ ಗಾಂಧಿ ಪಕ್ಷದ ನಾಯಕರಿಗೆ ಕರೆ ಮಾಡಿದರು ಆ ಬಳಿಕ ಪರಿಸ್ಥಿತಿ ಬದಲಾಯಿತು ಎಂದು ಹೇಳಿದ್ದಾರೆ.
ಇದರಿಂದ 2014 ರಲ್ಲಿ ಆಗಿನ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದರು ಮತ್ತು 2015 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಅವರು 2021 ರಲ್ಲಿ ಅಸ್ಸಾಂ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಈಡಿಗ ನನಗೆ ಬಿಜೆಪಿಯಿಂದ ಮುಖ್ಯಮಂತ್ರಿಯಾಗಿ ಅಸ್ಸಾಂ ಮತ್ತು ಸನಾತನ ಧರ್ಮಕ್ಕೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. ಆದರೆ ಕಾಂಗ್ರೆಸ್‌ನಲ್ಲಿದ್ದಾಗ ಅದು ಸಾಧ್ಯವಾಗಲಿಲ್ಲ. ಇದಕ್ಕಾಗಿ ರಾಹುಲ್ ಗಾಂಧಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.
ಆದರೆ ಆಗ ಮುಖ್ಯಮಂತ್ರಿಯಾಗಿದ್ದರೆ ತಮ್ಮ ಇಮೇಜ್‌ಗೆ ಧಕ್ಕೆ ಬರುತ್ತಿತ್ತು ಎಂದು ಶರ್ಮಾ ಹೇಳಿದರು. ಈ ಘಟನೆಗಳಿಗೆ ಅನೇಕ ಜನರು ಸಾಕ್ಷಿಗಳಾಗಿದ್ದು, ಭವಿಷ್ಯದಲ್ಲಿ ತಾವು ಪುಸ್ತಕ ಬರೆದರೆ ಅವುಗಳ ಬಗ್ಗೆ ವಿವರವಾಗಿ ವಿವರಿಸಬಹುದು ಎಂದು ಅವರು ಹೇಳಿದರು.



