ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವು ಪ್ರದೇಶಗಳಲ್ಲಿ ಪ್ರಕೃತಿ ವಿಕೋಪದ ಪರಿಸ್ಥಿತಿ ನಿರ್ಮಾಣವಾಗಿದೆ. ದಿಬಾಂಗ್ ವ್ಯಾಲಿ ಮತ್ತು ಅಪ್ಪರ್ ಸುಬನ್ಸಿರಿ ಜಿಲ್ಲೆಗಳಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಹಠಾತ್ ಪ್ರವಾಹದಲ್ಲಿ ನಾಲ್ವರು ಮೃತಪಟ್ಟಿದ್ದು, ಐವರು ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಅಪ್ಪರ್ ಸುಬನ್ಸಿರಿಯಲ್ಲಿ ಭೂಕುಸಿತಕ್ಕೆ ನಾಲ್ವರು ಬಲಿ
ಅಪ್ಪರ್ ಸುಬನ್ಸಿರಿ ಜಿಲ್ಲೆಯ ಕಿಯೋಜರಿಂಗ್-ಬ್ಯಾಚಿಂಗ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಭೂಕುಸಿತ ಸಂಭವಿಸಿದೆ. ಭಾರಿ ಪ್ರಮಾಣದ ಮಣ್ಣು ಮತ್ತು ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದರು. ಈ ಘಟನೆಯಲ್ಲಿ ಟಾಡು ಬಾಕಿ, ತಾಜಿ ರೈ, ಮಾರ್ಕೋಶ್ ಬಸೂಮತಾರಿ ಮತ್ತು ಬಾಬುಲ್ ಅಲಿ ಮೃತಪಟ್ಟಿದ್ದಾರೆ.
ಬಾಬುಲ್ ಅಲಿ ಅವರ ಮೃತದೇಹವನ್ನು ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಉಳಿದವರ ಕುರಿತು ಶೋಧ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ:
ದಿಬಾಂಗ್ ವ್ಯಾಲಿಯಲ್ಲಿ ಸೇನಾ ಶಿಬಿರಕ್ಕೆ ಪ್ರವಾಹದ ಹೊಡೆತ
ದಿಬಾಂಗ್ ವ್ಯಾಲಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಪಾಸು ಪಾನಿ ಪ್ರದೇಶದಲ್ಲಿದ್ದ ಸೇನಾ ಶಿಬಿರದ ಎರಡು ಶೆಲ್ಟರ್ ಗಳು ಕೊಚ್ಚಿಕೊಂಡು ಹೋಗಿದೆ. ಈ ವೇಳೆ ಏಳು ಸೇನಾ ಸಿಬ್ಬಂದಿ ಪ್ರವಾಹದ ರಭಸಕ್ಕೆ ಸಿಲುಕಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಆದರೆ ಹವಾಲ್ದಾರ್ ಉಪೇಂದರ್ ಹಾಗೂ ಕುಂದನ್, ವಿನೋದ್, ಆದಿತ್ಯ ಮತ್ತು ಸಮುಂದಾ ಎಂಬ ಐವರು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾಗಿರುವ ಯೋಧರಿಗಾಗಿ 5ನೇ ಗ್ರೆನೇಡಿಯರ್ ಘಟಕದ ಎರಡು ಶೋಧ ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಐಟಿಬಿಪಿಯ 58ನೇ ಬೆಟಾಲಿಯನ್, ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್‌ನ 62 ಆರ್‌ಸಿಸಿ, ಅರುಣಾಚಲ ಪ್ರದೇಶ ಪೊಲೀಸರು ಹಾಗೂ ಸ್ಥಳೀಯ ಸ್ವಯಂಸೇವಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.



