February 18, 2026
Wednesday, February 18, 2026
spot_img

ಘಟಪ್ರಭಾದಲ್ಲಿ ತಪ್ಪಿದ ಭೀಕರ ದುರಂತ: 72 ವರುಷಗಳ ಹಳೆಯ ಸೇತುವೆ ಕುಸಿತ!

ಹೊಸದಿಗಂತ ಬೆಳಗಾವಿ:

ಜಿಲ್ಲೆಯ ಘಟಪ್ರಭಾ ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಹಳೆಯ ಸೇತುವೆಯೊಂದು ಕುಸಿತಗೊಂಡಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

1954ರಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆಯು ಬರೋಬ್ಬರಿ 72 ವರ್ಷಗಳ ಕಾಲ ಜನಸೇವೆಯಲ್ಲಿತ್ತು. ಆದರೆ, ವಯೋಸಹಜವಾಗಿ ಜರ್ಜರಿತಗೊಂಡಿದ್ದ ಸೇತುವೆಯ ಒಂದು ಭಾಗವು ದಿಢೀರನೆ ಕುಸಿದು ಬಿದ್ದಿದೆ. ಜನಸಂದಣಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ತಕ್ಷಣವೇ ಸೇತುವೆಯ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ. ಇದರಿಂದಾಗಿ ಘಟಪ್ರಭಾ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ದಾರಿ ಸ್ಥಗಿತಗೊಂಡಿದ್ದು, ದೈನಂದಿನ ಪ್ರಯಾಣಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿಷಯ ತಿಳಿದ ತಕ್ಷಣ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆಯ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಆ ಕಡೆ ಸುಳಿಯದಂತೆ ಸೂಚಿಸಲಾಗಿದೆ. ಪರ್ಯಾಯ ಮಾರ್ಗಗಳ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !