October 31, 2026
Saturday, October 31, 2026
spot_img

‘ಜೈಲರ್ 2’: ಮುತ್ತುವೇಲ್ ಪಾಂಡಿಯನ್ ಈಸ್ ಬ್ಯಾಕ್; ಶಿವಣ್ಣ–ಮೋಹನ್‌ಲಾಲ್ ಜೊತೆ ರಜನಿಕಾಂತ್ ಮಾಸ್ ಧಮಾಕಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಜೈಲರ್ 2 ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮತ್ತೊಮ್ಮೆ ‘ಟೈಗರ್’ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನಿಕಾಂತ್ ಅಬ್ಬರಿಸುವ ಸೂಚನೆ ನೀಡಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಸೀಕ್ವೆಲ್‌ನಲ್ಲಿ ಆ್ಯಕ್ಷನ್, ಕಾಮಿಡಿ, ಥ್ರಿಲ್ ಮತ್ತು ದೊಡ್ಡ ಮಟ್ಟದ ಮುಖಾಮುಖಿಗೆ ವೇದಿಕೆ ಸಿದ್ಧವಾಗಿದೆ.

ಟ್ರೇಲರ್ ನಲ್ಲಿ ಏನಿದೆ?

ಟ್ರೇಲರ್ ಆರಂಭದಲ್ಲೇ ಕಳೆದ ಎರಡು ತಿಂಗಳಿಂದ ನಗರದಲ್ಲಿ ನಡೆಯುತ್ತಿರುವ ಭಾರೀ ಅವಾಂತರಗಳ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆ ಎದುರಾಗುತ್ತದೆ. ಆ ವ್ಯಕ್ತಿಯ ನಿಜವಾದ ಗುರುತು ಪತ್ತೆಹಚ್ಚುವುದು ಅಸಾಧ್ಯ ಎಂಬ ಮಾತುಗಳ ನಡುವೆ ಅನಿರುದ್ಧ್ ರವಿಚಂದರ್ ಅವರ ಹೈ-ಎನರ್ಜಿ ಸಂಗೀತದೊಂದಿಗೆ ರಜನಿಕಾಂತ್ ಭರ್ಜರಿ ಎಂಟ್ರಿ ಕೊಡುತ್ತಾರೆ. ‘ಟೈಗರ್’ ಮುತ್ತುವೇಲ್ ಪಾಂಡಿಯನ್ ಮತ್ತೆ ತನ್ನ ಹಳೆಯ ಸ್ಟೈಲ್‌ನಲ್ಲಿ ಶತ್ರುಗಳಿಗೆ ಸವಾಲು ಹಾಕುತ್ತಿರುವುದು ಟ್ರೇಲರ್‌ನ ಪ್ರಮುಖ ಆಕರ್ಷಣೆಯಾಗಿದೆ.

ಶತ್ರುಗಳು ಸಾಮಾನ್ಯ ವ್ಯಕ್ತಿಯೊಬ್ಬನಿಂದ ಈ ಆಟ ನಡೆಯುತ್ತಿಲ್ಲ, ಇದರ ಹಿಂದೆ ಇನ್ನಷ್ಟು ದೊಡ್ಡ ಶಕ್ತಿ ಇರಬಹುದು ಎಂಬ ಸುಳಿವು ನೀಡುತ್ತಾರೆ. ಸ್ನೈಪರ್ ಮುಖಾಮುಖಿಯ ದೃಶ್ಯದಲ್ಲೂ ರಜನಿಕಾಂತ್ ತಮ್ಮದೇ ಶೈಲಿಯ ಡೆಡ್‌ಪ್ಯಾನ್ ಹಾಸ್ಯದೊಂದಿಗೆ ಗಮನ ಸೆಳೆಯುತ್ತಾರೆ. ಎದುರಿನ ವ್ಯಕ್ತಿಗೆ ‘ಟೀ ಬೇಕಾ, ಕಾಫಿ ಬೇಕಾ?’ ಎಂದು ಕೇಳುತ್ತಲೇ ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸುವ ದೃಶ್ಯ ಟ್ರೇಲರ್‌ನಲ್ಲಿ ಸಖತ್ ವೈರಲ್ ಆಗುವ ಸಾಧ್ಯತೆಯಿದೆ.

ಕಲಾವಿದರ ಸಮಾಗಮ

ಚಿತ್ರದ ಮತ್ತೊಂದು ದೊಡ್ಡ ಆಕರ್ಷಣೆ ಎಂದರೆ ಸ್ಟಾರ್‌ಗಳ ಸಮಾಗಮ. ಶಿವರಾಜ್‌ಕುಮಾರ್ ಮತ್ತೆ ನರಸಿಂಹ ಪಾತ್ರದಲ್ಲಿ ಕಾಣಿಸಿಕೊಂಡರೆ, ಮೋಹನ್‌ಲಾಲ್ ಕೂಡ ಮ್ಯಾಥ್ಯೂ ಆಗಿ ಮರಳಿದ್ದಾರೆ. ಜಾಕಿ ಶ್ರಾಫ್, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ, ಯೋಗಿ ಬಾಬು ಸೇರಿದಂತೆ ಹಲವು ಕಲಾವಿದರು ಟ್ರೇಲರ್‌ನಲ್ಲಿ ಗಮನ ಸೆಳೆದಿದ್ದಾರೆ.

ಅನಿರುದ್ಧ್ ಸಂಗೀತ, ವಿಜಯ್ ಕಾರ್ತಿಕ್ ಕಣ್ಣನ್ ಅವರ ಛಾಯಾಗ್ರಹಣ ಮತ್ತು ಆರ್. ನಿರ್ಮಲ್ ಅವರ ಸಂಕಲನ ಚಿತ್ರಕ್ಕೆ ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದೆ. ಜೈಲರ್ 2 ಅಕ್ಟೋಬರ್ 15ರಂದು ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ.

Must Read