ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸೌಧದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ‘ಎಕ್ಸ್’ ವೇದಿಕೆಯಲ್ಲಿ ಸರಣಿ ಪೋಸ್ಟ್ ಮಾಡಿರುವ ಜೆಡಿಎಸ್, ಇದು ಸರ್ಕಾರದ “ಹೇಡಿತನ ಮತ್ತು ಭ್ರಷ್ಟಾಚಾರದ ಭಯ” ಎಂದು ಬಣ್ಣಿಸಿದೆ.
ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಅವುಗಳ ಧ್ವನಿ ಅಡಗಿಸುವುದು ಸಂವಿಧಾನ ವಿರೋಧಿ ನಡೆ ಎಂದು ಜೆಡಿಎಸ್ ಕಿಡಿಕಾರಿದೆ.
“ಸದಾ ಸಂವಿಧಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು, ಈಗ ‘ಸಮಾಜವಾದಿ’ ಮುಖವಾಡ ತೊಟ್ಟ ‘ಮಜವಾದಿ’ಯಂತೆ ವರ್ತಿಸುತ್ತಿದ್ದಾರೆ. ಅವರಿಗೆ ಈಗ ನಡುಕ ಶುರುವಾಗಿದೆ,” ಎಂದು ಲೇವಡಿ ಮಾಡಿದೆ.
ವರ್ಗಾವಣೆ ದಂಧೆ, ಕಮಿಷನ್ ಹಗರಣಗಳು ಮತ್ತು ಸರ್ಕಾರದ ಅಕ್ರಮಗಳು ಎಲ್ಲಿ ಬಯಲಾಗುತ್ತವೆಯೋ ಎಂಬ ಆತಂಕದಿಂದ ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದೆ.
“ಮುಖ್ಯಮಂತ್ರಿಗಳೇ, ಸತ್ಯವನ್ನು ಮುಚ್ಚಿಡಲು ಗೋಡೆಗಳನ್ನು ಕಟ್ಟುವುದು ಬಿಟ್ಟು, ಜನರಿಗೆ ಪಾರದರ್ಶಕ ಆಡಳಿತ ನೀಡಿ,” ಎಂದು ಜೆಡಿಎಸ್ ನೇರವಾಗಿ ಸವಾಲು ಹಾಕಿದೆ.
ಸಚಿವರು ಮತ್ತು ಶಾಸಕರ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಕಾಂಗ್ರೆಸ್ ಸರ್ಕಾರಕ್ಕೆ ಯಾಕಿಷ್ಟು ಭಯ? ಇದು ಪ್ರಜಾಪ್ರಭುತ್ವದ ಆಶಯಗಳ ಮೇಲೆ ನಡೆಯುತ್ತಿರುವ ನೇರ ಪ್ರಹಾರ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.



