August 15, 2026
Saturday, August 15, 2026
spot_img

ಕಳಸದಲ್ಲಿ ಸೋಮಾವತಿ ನದಿಗೆ ಉರುಳಿದ ಕಾರು: ದಂಪತಿ ಪ್ರಾಣಾಪಾಯದಿಂದ ಪಾರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗಣಪತಿ ಕಟ್ಟೆ ಸಮೀಪ ಬೆಂಗಳೂರು ಮೂಲದ ದಂಪತಿ ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್‌ ದಂಪತಿ ಯಾವುದೇ ಗಂಭೀರ ಅಪಾಯವಿಲ್ಲದೆ ಪಾರಾಗಿದ್ದಾರೆ.

ಬಂಡೆಗೆ ಸಿಲುಕಿದ ಕಾರು

ಸೋಮಾವತಿ ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದ ವೇಳೆ ಕಾರು ನದಿಗೆ ಬಿದ್ದಿದೆ. ಆದರೆ ಕಾರಿಗೆ ಬಂಡೆಯೊಂದು ಅಡ್ಡ ಸಿಕ್ಕಿದ್ದರಿಂದ ಅದು ನೀರಿನ ಸೆಳೆತದಲ್ಲಿ ಕೊಚ್ಚಿಕೊಂಡು ಹೋಗದೆ ಅಲ್ಲಿಯೇ ಸಿಲುಕಿಕೊಂಡಿದೆ. ಬಂಡೆ ಅಡ್ಡ ಸಿಗದಿದ್ದರೆ ಕಾರಿನಲ್ಲಿದ್ದ ದಂಪತಿ ಕೂಡ ನೀರಿನ ರಭಸಕ್ಕೆ ಕೊಚ್ಚಿಹೋಗುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳೀಯರಿಂದ ತಕ್ಷಣ ರಕ್ಷಣಾ ಕಾರ್ಯ

ಕಾರು ನದಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಹಗ್ಗದ ಸಹಾಯದಿಂದ ಕಾರನ್ನು ಮೇಲಕ್ಕೆ ಎಳೆದು ದಂಪತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ:

ತಡೆಗೋಡೆ ನಿರ್ಮಿಸಲು ಗ್ರಾಮಸ್ಥರ ಒತ್ತಾಯ

ಸೋಮಾವತಿ ನದಿಗೆ ಸೂಕ್ತ ತಡೆಗೋಡೆ ಇಲ್ಲದಿರುವುದರಿಂದ ಈ ಪ್ರದೇಶದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ 3ರಿಂದ 4 ಅಪಘಾತಗಳು ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯ ಸಂಭವಿಸುವ ಮುನ್ನ ಸೋಮಾವತಿ ನದಿ ಬಳಿ ಸುರಕ್ಷತಾ ತಡೆಗೋಡೆ ನಿರ್ಮಿಸಿ, ವಾಹನ ಸವಾರರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !