Thursday, October 16, 2025

DOWRY | ತವರು ಮನೆಯಿಂದ ದುಡ್ಡು ತಗೊಂಡು ಬಾರದ ಪತ್ನಿಗೆ ಬೆಂಕಿ ಹಚ್ಚಿದ ಪೊಲೀಸ್‌ ಕಾನ್ಸ್‌ಟೆಬಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಪೊಲೀಸ್‌ ಕಾನ್ಸ್‌ಟೇಬಲ್‌ ಪತ್ನಿಗೆ ವರದಕ್ಷಿಣಿ ಕಿರುಕುಳ ನೀಡಿ ಬೆಂಕಿ ಹಚ್ಚಿದ್ದಾನೆ.

ವೃತ್ತಿಯಲ್ಲಿ ನರ್ಸ್ ಆಗಿರುವ ಪಾರುಲ್ (32) ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿರುವ ಪಾರುಲ್‌ ಅವರ ಪತಿ ದೇವೇಂದ್ರ ಇತ್ತೀಚೆಗೆ ರಾಂಪುರದಿಂದ ಬರೇಲಿಗೆ ವರ್ಗಾವಣೆಗೊಂಡು ರಜೆಯ ಮೇಲೆ ಮನೆಯಲ್ಲಿದ್ದ. ವರದಕ್ಷಿಣೆ ಕಿರುಕುಳ ನೀಡಿ ಆಕೆಗೆ ಬೆಂಕಿ ಇಟ್ಟು, ಜೀವಂತವಾಗಿ ಸುಟ್ಟುಹಾಕಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಪಾರುಲ್ ಸಹೋದರ ದೂರು ದಾಖಲಿಸಿದ್ದು, ಆಕೆಯ ಪತಿ ದೇವೇಂದ್ರ, ಆತನ ತಾಯಿ ಮತ್ತು ಸೋನು, ಗಜೇಶ್, ಜಿತೇಂದ್ರ, ಸಂತೋಷ್ ಎಂಬ ನಾಲ್ವರು ಪುರುಷ ಸಂಬಂಧಿಕರ ವಿರುದ್ಧ ಆರೋಪ ಹೊರಿಸಲಾಗಿದೆ. ಕೌಟುಂಬಿಕ ಹಿಂಸೆ ಮತ್ತು ಕೊಲೆಯತ್ನದ ಗಂಭೀರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಆರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಮುಂಜಾನೆ ನೆರೆಹೊರೆಯವರು ತಮಗೆ ಮಾಹಿತಿ ನೀಡಿದ್ದರು ಎಂದು ಪಾರುಲ್ ತಾಯಿ ಅನಿತಾ ವಿವರಿಸಿದ್ದಾರೆ.

ನಾನು ಸ್ಥಳಕ್ಕೆ ತಲುಪಿದಾಗ, ನನ್ನ ಮಗಳು ನೋವಿನಿಂದ ನರಳುತ್ತಿದ್ದಳು. ತೀವ್ರವಾಗಿ ಸುಟ್ಟು ಹೋಗಿದ್ದಳು. ಅವಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಕೆಯ ಸ್ಥಿತಿ ಗಂಭೀರವಾದ ಕಾರಣ ದೆಹಲಿಗೆ ಕರೆದೊಯ್ಯಬೇಕಾಯಿತು. ಅವಳು ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ.

error: Content is protected !!