ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ನಲ್ಲಿ ನೆದರ್ಲೆಂಡ್ ವಿರುದ್ಧದ ಶಿವಂ ದುಬೆ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ 193 ರನ್ ಗಳಿಸಿದೆ.
ಗುಜರಾತ್ ನ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಪೇರಿಸಿದ್ದು, ನೆದರ್ಲೆಂಡ್ ಗೆ 194 ರನ್ ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಅಭಿಷೇಕ್ ಶರ್ಮಾ ಡಕೌಟ್ ಆಗಿ ಮತ್ತೆ ನಿರಾಶೆ ಮೂಡಿಸಿದರು. ಇಶಾನ್ ಕಿಶನ್ ಕೂಡ 18 ರನ್ ಗಳಿಸಿ ವಿಲಕ್ಷಣ ರೀತಿಯಲ್ಲಿ ಬೌಲ್ಡ್ ಆದರು. ಬಳಿಕ ತಿಲಕ್ ವರ್ಮಾ (31) ಮತ್ತು ನಾಯಕ ಸೂರ್ಯ ಕುಮಾರ್ ಯಾದವ್ (34) ಜೋಡಿ ಮೂರನೇ ವಿಕೆಟ್ ಗೆ 30 ರನ್ ಗಳ ಜೊತೆಯಾಟವಾಡಿತು. ಈ ಹಂತದಲ್ಲಿ ತಿಲಕ್ ವರ್ಮಾ ಲೋಗನ್ ವ್ಯಾನ್ ಬೀಕ್ ಬೌಲಿಂಗ್ ನಲ್ಲಿ ಔಟಾದರು.
ಬಳಿಕ ಸೂರ್ಯ ಜೊತೆಗೂಡಿದ ಶಿವಂದುಬೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದರೂ ಬಳಿಕ ಲಯಕಂಡುಕೊಂಡು ಉತ್ತಮ ಬ್ಯಾಟಿಂಗ್ ಮಾಡಿದರು. ಸೂರ್ಯ 34 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಹಾರ್ದಿಕ್ ಪಾಂಡ್ಯಾ ಮತ್ತು ಶಿವಂ ದುಬೆ ಜೋಡಿ ಕೇವಲ 35 ಎಸೆತಗಳಲ್ಲಿ 76 ರನ್ ಜೊತೆಯಾಟವಾಡಿ ಭಾರತದ ಮೊತ್ತ 190ರ ಗಡಿ ದಾಟುವಂತೆ ಮಾಡಿದರು.



