September 24, 2026
Thursday, September 24, 2026
spot_img

ಮಳೆ ಇಲ್ಲದೆ ಕಂಗಾಲಾದ ರಾಜ್ಯದ ಜನತೆಗೆ ಗುಡ್‌ನ್ಯೂಸ್: ಪ್ರತಿ ರೈತನಿಗೆ 2,500 ಪರಿಹಾರ ಘೋಷಿಸಿದ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈ ವರುಷ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಬರದಿಂದ ಕಂಗಲಾಗಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಬರಪೀಡಿತ ತಾಲೂಕುಗಳ ಕೃಷಿಕರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸಲು ಮುಂದಾಗಿರುವ ಸರ್ಕಾರ, ಪ್ರತಿ ರೈತನ ಬ್ಯಾಂಕ್ ಖಾತೆಗೆ ನೇರವಾಗಿ 2,500 ರೂ. ಇನ್‌ಪುಟ್ ಸಬ್ಸಿಡಿ ಜಮೆ ಮಾಡಲು ತೀರ್ಮಾನಿಸಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್​ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ʼದೇಶದ ಸುಮಾರು 17 ರಿಂದ 18 ರಾಜ್ಯಗಳಲ್ಲಿ ಇಂದು ಭೀಕರ ಬರಗಾಲ ಆವರಿಸಿದೆ. ಈ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ನಾವು ಕೇಂದ್ರ ಸರ್ಕಾರಕ್ಕೆ ಸಾಲು ಸಾಲು ಪತ್ರಗಳನ್ನು ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರದ ಅಧ್ಯಯನ ತಂಡವೂ ರಾಜ್ಯಕ್ಕೆ ಭೇಟಿ ನೀಡಿಲ್ಲ. ಆದರೆ, ನಮ್ಮ ರೈತರು ಕಷ್ಟದಲ್ಲಿದ್ದಾರೆ. ನಾವು ಅವರ ಕೈ ಬಿಡುವುದಿಲ್ಲʼ ಎಂದು ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ.

ಮೊದಲ ಹಂತದಲ್ಲೇ 1,250 ಕೋಟಿ ರೂ. ಬಿಡುಗಡೆ

ಕೇಂದ್ರದ ಎನ್‌ಡಿಆರ್‌ಎಫ್ (NDRF) ಅನುದಾನದ ನಿರೀಕ್ಷೆಯಲ್ಲೇ ಕಾಲ ಕಳೆಯದೆ, ರಾಜ್ಯ ಸರ್ಕಾರವು ತನ್ನದೇ ಸ್ವಂತ ಬಜೆಟ್‌ನಿಂದ ಮೊದಲ ಹಂತದಲ್ಲಿ ಬರೋಬ್ಬರಿ 1,250 ಕೋಟಿ ರೂ.ಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಬಿಡುಗಡೆ ಮಾಡಿದೆ. ಈ ಯೋಜನೆಯಿಂದ ರಾಜ್ಯದ ಸುಮಾರು 40 ರಿಂದ 50 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಕ್ಷಣದ ಆರ್ಥಿಕ ನೆರವು ಸಿಗಲಿದೆ.

ಸಾಲ ಮರುಪಾವತಿ ಅವಧಿ ವಿಸ್ತರಣೆ

ಕೇವಲ ನಗದು ಪರಿಹಾರ ಮಾತ್ರವಲ್ಲದೆ, ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ಸರ್ಕಾರ ಮತ್ತೊಂದು ದೊಡ್ಡ ರಿಲೀಫ್ ನೀಡಿದೆ. ರೈತರು ಪಡೆದಿರುವ ಸಾಲದ ಮರುಪಾವತಿಯ ಕಾಲಾವಧಿಯನ್ನು ಪ್ರಸ್ತುತ 36 ತಿಂಗಳಿನಿಂದ ಬರೋಬ್ಬರಿ 60 ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ. ಇದೇ ವೇಳೆ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಇಲಾಖೆ ಗರಂ ಆಗಿದ್ದು,. ರೈತರಿಗೆ ಯಾವುದೇ ರೀತಿಯ ಮಾನಸಿಕ ಅಥವಾ ಕಾನೂನುಬಾಹಿರ ಕಿರುಕುಳ ನೀಡಿದರೆ ಅಂತಹ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:

ದಾಖಲೆ ಬರೆದ ಬೆಳೆ ವಿಮೆ ನೋಂದಣಿ

ಕರ್ನಾಟಕದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಈ ವರ್ಷ ಅತ್ಯಂತ ಹೆಚ್ಚು ಅಂದರೆ ಸುಮಾರು 49 ಲಕ್ಷ ರೈತರು ತಮ್ಮ ಸುರಕ್ಷತೆಗಾಗಿ ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಸಂಕಷ್ಟದ ಸಮಯದಲ್ಲಿ ರೈತರಿಗೆ ನ್ಯಾಯಯುತ ವಿಮಾ ಮೊತ್ತ ಸಿಗಲಿದ್ದು, ಇದಕ್ಕಾಗಿ ಸರ್ಕಾರದಿಂದಲೇ 1,200 ಕೋಟಿ ರೂ.ಗಳ ಪ್ರೀಮಿಯಂ ಮೊತ್ತವನ್ನು ಭರಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ. ಈ ಎಲ್ಲಾ ಕ್ರಮಗಳು ಬರದ ಮುಷ್ಟಿಯಲ್ಲಿ ಸಿಲುಕಿರುವ ಅನ್ನದಾತನಿಗೆ ಹೊಸ ಭರವಸೆ ಮೂಡಿಸಿವೆ.

Must Read