April 11, 2026
Saturday, April 11, 2026
spot_img

ವೈದ್ಯರ ಎಡವಟ್ಟು…ಐದು ವರ್ಷದ ಬಳಿಕ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಪತ್ತೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಆಲಪ್ಪುಳ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ವೈದ್ಯರು ಕತ್ತರಿಯನ್ನು ಹೊಟ್ಟೆಯ ಒಳಗಿಟ್ಟು ಹೊಲಿಗೆ ಹಾಕಿದ ಪ್ರಕರಣ 5 ವರ್ಷದ ನಂತರ ಬಳಕಿಗೆ ಬಂದಿದೆ.

ಪುನ್ನಪ್ರಾ ಮೂಲದ ಉಷಾ ಜೋಸೆಫ್ ಅವರಿಗೆ ಮೇ 5, 2021 ರಂದು ನಡೆದ ಶಸ್ತ್ರಚಿಕಿತ್ಸೆಯ ನಂತರ ಹಲವಾರು ವರ್ಷಗಳಿಂದ ನಿರಂತರ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಪರೀಕ್ಷೆ ನಡೆಸಿದ ವೈದ್ಯರು ಏನು ಸಮಸ್ಯೆ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರೂ ಪದೇ ಪದೇ ಹೊಟ್ಟೆ ನೋವು ಬರುತ್ತಿರುವ ಕಾರಣ ಮೂತ್ರಕೋಶದಲ್ಲಿ ಕಿಡ್ನಿ ಸಮಸ್ಯೆ ಇರಬಹುದು ಎಂದು ಖಾಸಗಿ ವೈದ್ಯರ ಸಲಹೆಗೆ ಎಕ್ಸ್-ರೇ ಮಾಡಿದ್ದಾರೆ. ಪರೀಕ್ಷೆಯ ವೇಳೆ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸೆಗೆ ಬಳಸಿದ್ದ ಉಪಕರಣ ಇರುವುದನ್ನು ನೋಡಿ ಶಾಕ್ ಆಗಿದ್ದಾರೆ .

ಈ ಕುರಿತು ಮಾತನಾಡಿದ ಉಷಾ ಅವರ ಪುತ್ರ ಶಿಬಿನ್‌ , ತಾಯಿಗೆ ಗರ್ಭಕೋಶದಲ್ಲಿ ಗೆಡ್ಡೆ ಬೆಳೆದಿತ್ತು. ಈ ಗೆಡ್ಡೆ ತೆಗೆಸಲು 2021ರ ಮೇನಲ್ಲಿ ಅಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ಆಪರೇಷನ್‌ ಮಾಡಲಾಗಿದೆ. ಈ ಸರ್ಜರಿ ನಡೆಯುವಾಗ ಉಪಕರಣವನ್ನು ಹೊಟ್ಟೆಯ ಒಳಗಡೆ ಬಿಟ್ಟಿದ್ದಾರೆ . ಇದರಿಂದ ಅವರಿಗೆ ಹೊಟ್ಟೆ ನೋವು ಆರಂಭವಾಗಿತ್ತು. ಪದೇ ಪದೇ ಹೊಟ್ಟೆ ನೋವು ಆಗುತ್ತಿದೆ ಎಂದರೂ ಅಲಪ್ಪುಳ ವೈದ್ಯಕೀಯ ಕಾಲೇಜಿನವರು ಸರಿಯಾಗಿ ಪರೀಕ್ಷೆ ಮಾಡಿರಲಿಲ್ಲ. ಕೊನೆಗೆ ಖಾಸಗಿ ವೈದ್ಯರ ಬಳಿ ತೋರಿಸಿದಾಗ ವೈದ್ಯರ ಎಡವಟ್ಟು ಗೊತ್ತಾಗಿದೆ.

ಇದೀಗ ಉಷಾ ಜೋಸೆಫ್‌ ಕುಟುಂಬಸ್ಥರು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದ ವಿರುದ್ಧ ಅಂಬಲಪುಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್, ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದು, ಶಸ್ತ್ರಚಿಕಿತ್ಸೆಯಲ್ಲಿ ಭಾಗವಾಗಿದ್ದ ಮತ್ತು ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳನ್ನು ವಿಚಾರಣೆಯ ಭಾಗವಾಗಿ ಅಮಾನತುಗೊಳಿಸಲು ಸೂಚನೆ ನೀಡಿದ್ದಾರೆ. ತನಿಖೆಯ ಭಾಗವಾಗಿ ಕೊಟ್ಟಾಯಂ ಮತ್ತು ತಿರುವನಂತಪುರಂ ವೈದ್ಯಕೀಯ ಕಾಲೇಜುಗಳ ತಜ್ಞ ವೈದ್ಯರನ್ನು ಆಲಪ್ಪುಳ ವೈದ್ಯಕೀಯ ಕಾಲೇಜಿಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !