ಕಲಬುರಗಿ:ಹಿಂದು ಮಹಾಗಣಪತಿ ಸಮಿತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ನಗರದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಅದ್ಧೂರಿಯಾಗಿ ಈ ಬಾರಿಯ ವಿಶೇಷ ತಿರುಪತಿ ತಿರುಮಲ ದೇವಸ್ಥಾನದ ಮಾದರಿಯಲ್ಲಿ ಸಿದ್ದಪಡಿಸಿದ ಅಲಂಕಾರದೊಂದಿಗೆ ೨೧ ದಿನಗಳ ಕಾಲದ ಹಿಂದು ಮಹಾಗಣಪತಿಯನ್ನು ಬುಧವಾರ ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡಲಾಯಿತು.
ಪ್ರತಿಷ್ಟಾಪನೆಗೂ ಮುನ್ನ ನಗರದ ಶರಣಬಸವೇಶ್ವರರ ದೇವಸ್ಥಾನದಿಂದ ಸಮಿತಿಯ ನೂರಾರು ಪದಾಧಿಕಾರಿಗಳು ಹಾಗೂ ಹಿಂದೂ ಬಾಂಧವರು ದೇಸಿ ವಾದ್ಯಗಳೊಂದಿಗೆ ಗಣೇಶನ ಜೈ ಘೋಷಣೆಗಳು ಕೂಗುತ್ತಾ ನಗರದ ಕೋಟೆಯವರೆಗೂ ಮೆರವಣಿಗೆ ಮೂಲಕ ಆಗಮಿಸಿ,ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಮಾಡುವ ಮೂಲಕ ಪ್ರತಿಷ್ಟಾಪನೆ ಮಾಡಿದರು.
ಮುಂಬರುವ ಸೆ.೭ರಂದು ಖ್ಯಾತ ವಾಗ್ಮಿ,ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಂದ ಆಪರೇಷನ್ ಸಿಂಧೂರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಒಂದೆಡೆಯಾದರೆ,ಕ್ಷಾತ್ರ ಪರಂಪರೆಯ ಕುರಿತು ದಿಕ್ಸೂಚಿ ಭಾಷಣ ನೀಡಲು ಕಾರ್ಕಳದ ಶ್ರೀಕಾಂತ್ ಶೆಟ್ಟಿ ಸೆ.೯ರಂದು ನಗರಕ್ಕೆ ಆಗಮಿಸಿ ಮಾತನಾಡಲಿದ್ದಾರೆ ಎಂದು ಸಮಿತಿ ಕಾರ್ಯದರ್ಶಿ ಸುಮಂಗಲಾ ಚಕ್ರವರ್ತಿ ತಿಳಿಸಿದರು.
ದೇಶದ ಗಡಿ ಕಾಯುವ ಯೋಧ,ಅನ್ನ ಕೊಡುವ ರೈತರ ಬದುಕು ಸುಂದರವಾಗಿ ಇರಬೇಕು ಎಂಬ ಕಲ್ಪನೆಯಿಂದ ಸೆ.೧೪ರ ಸಂಜೆ ಲಕ್ಷ ದೀಪೋತ್ಸವ ಆಯೋಜನೆ ಮಾಡಲಾಗಿದೆ.ತದನಂತರ ಸೆ.೧೬ರ ಬೆಳಿಗ್ಗೆ ೧೦-೩೦ಕ್ಕೆ ಸಕಲ ದೇಸಿ ವಾದ್ಯಗಳೊಂದಿಗೆ ೨೧ ದಿನಗಳ ಹಿಂದೂ ಮಹಾಗಣಪತಿಯ ವಿಸರ್ಜನಾ ಕಾರ್ಯಕ್ರಮ ನೆರವೇರಲಿದೆ ಎಂದು ಹಿಂದು ಮಹಾಗಣಪತಿ ಸಮಿತಿಯ ಕಾರ್ಯದರ್ಶಿ ರಾಜು ನವಲದಿ ತಿಳಿಸಿದರು.