February 21, 2026
Saturday, February 21, 2026
spot_img

ಮದ್ಯದ ಅಮಲಿನಲ್ಲಿ ಕಾರು ಚಾಲನೆ: ಗೃಹಪ್ರವೇಶಕ್ಕೆ ಸಿದ್ಧವಾಗುತ್ತಿದ್ದ ಕುಟುಂಬಕ್ಕೆ ಅಪಘಾತದ ಆಘಾತ!

ಹೊಸದಿಗಂತ ಸುಳ್ಯ:

ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಕುಟುಂಬವೊಂದಕ್ಕೆ ಮದ್ಯಪಾನಿಗಳ ಬೇಜವಾಬ್ದಾರಿಯುತ ಚಾಲನೆಯಿಂದಾಗಿ ಭೀಕರ ಅಪಘಾತವೊಂದು ಎದುರಾದ ಘಟನೆ ಸುಳ್ಯದ ಬೊಳುಬೈಲಿನಲ್ಲಿ ನಡೆದಿದೆ.

ತಮ್ಮ ಮನೆಯ ಗೃಹಪ್ರವೇಶದ ಅಂಗವಾಗಿ ಹೊಸ ಬಟ್ಟೆಗಳನ್ನು ಖರೀದಿಸಲು ಕುಟುಂಬ ಸಮೇತರಾಗಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಇವರು ಸಂಚರಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಅತಿವೇಗವಾಗಿ ಬಂದ ಮತ್ತೊಂದು ಕಾರು ಬಲವಾಗಿ ಡಿಕ್ಕಿ ಹೊಡೆದಿದೆ. ಹಿಂಬದಿಯಿಂದ ಬಂದ ಕಾರಿನಲ್ಲಿದ್ದ ಸವಾರರು ಮದ್ಯ ಸೇವಿಸಿದ್ದರೆನ್ನಲಾಗಿದ್ದು, ಮದ್ಯದ ಅಮಲಿನಲ್ಲಿ ವಾಹನದ ಮೇಲಿನ ನಿಯಂತ್ರಣ ತಪ್ಪಿದ್ದೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ಡಿಕ್ಕಿಯ ರಭಸಕ್ಕೆ ಮುಂಭಾಗದಲ್ಲಿದ್ದ ಕಾರಿನಲ್ಲಿದ್ದ ಓರ್ವ ವ್ಯಕ್ತಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಮತ್ತು ಪೊಲೀಸ್ ತನಿಖೆಯ ವರದಿ ನಿರೀಕ್ಷಿಸಲಾಗಿದೆ. ಗೃಹಪ್ರವೇಶದ ಸಿದ್ಧತೆಯಲ್ಲಿದ್ದ ಮನೆಯಲ್ಲಿ ಈ ಘಟನೆಯಿಂದಾಗಿ ಆತಂಕ ಮತ್ತು ವಿಷಾದದ ಛಾಯೆ ಆವರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !