ಹೊಸದಿಗಂತ ವರದಿ ಹಾಸನ:
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಹೆಗ್ಗಡಿಹಳ್ಳಿ ಗ್ರಾಮದ ಸಮೀಪ ಭೀಮ ಹೆಸರಿನ ಕಾಡಾನೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕಳೆದ ಹಲವು ದಿನಗಳಿಂದ ಸಕಲೇಶಪುರ ತಾಲೂಕಿನಲ್ಲಿ ಸಂಚರಿಸುತ್ತಿದ್ದ ಭೀಮ ಕಾಡಾನೆ ಮಂಗಳವಾರ ಸಂಜೆ ಲಿಂಗಾಪುರದ ಬಳಿ ಕಾಣಿಸಿಕೊಂಡಿತ್ತು. ಬಳಿಕ ರಾತ್ರಿ ಅರೇಹಳ್ಳಿ–ದೋಲನಮನೆ ರಸ್ತೆಯಲ್ಲಿ ಸಂಚರಿಸಿದ್ದು, ರಸ್ತೆಯಲ್ಲಿ ಕಾಡಾನೆ ಓಡಾಡುವುದನ್ನು ಕಂಡ ವಾಹನ ಸವಾರರು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ.
ರಸ್ತೆ ದಾಟಿದ ಬಳಿಕ ವೀರಭದ್ರೇಶ್ವರ ಕಾಫಿ ಎಸ್ಟೇಟ್ ಪ್ರವೇಶಿಸಿದ ಕಾಡಾನೆ, ತೋಟದೊಳಗೆ ಸಂಚರಿಸಿದೆ. ಜನವಸತಿ ಪ್ರದೇಶಗಳ ಸಮೀಪವೇ ಕಾಡಾನೆ ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಈ ಭಾಗದಲ್ಲಿ ಕಾಡಾನೆಗಳ ನಿರಂತರ ಹಾವಳಿಯಿಂದ ರೈತರು ಹಾಗೂ ಕೂಲಿ ಕಾರ್ಮಿಕರು ಕೃಷಿ ಕೆಲಸಗಳಿಗೆ ತೆರಳಲು ಜೀವಭಯ ಎದುರಿಸುವಂತಾಗಿದೆ. ಕಾಡಾನೆಗಳ ಸಂಚಾರದಿಂದ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗುತ್ತಿದ್ದು, ಜನರು ಆತಂಕದಲ್ಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:
ಅರಣ್ಯ ಇಲಾಖೆ ಅಧಿಕಾರಿಗಳು ಭೀಮ ಕಾಡಾನೆ ಸೇರಿದಂತೆ ಈ ಭಾಗದಲ್ಲಿ ಸಂಚರಿಸುತ್ತಿರುವ ಕಾಡಾನೆಗಳ ಚಲನವಲನದ ಮೇಲೆ ನಿಗಾ ವಹಿಸಿ, ಜನವಸತಿ ಪ್ರದೇಶಗಳಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಜನರ ಜೀವ ಹಾಗೂ ಆಸ್ತಿಪಾಸ್ತಿಗೆ ರಕ್ಷಣೆ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.



