September 25, 2026
Friday, September 25, 2026
spot_img

ಅಂಕೋಲಾ-ಗೋಕರ್ಣದ ಗಂಗಾವಳಿ ಸೇತುವೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಹೊಸದಿಗಂತ ವರದಿ ಅಂಕೋಲಾ:

ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಅಂಕೋಲಾ ಮತ್ತು ಗೋಕರ್ಣ ನಡುವೆ ಕೊಂಡಿಯಾಗಿ ಮಂಜಗುಣಿ ಬಳಿ ಗಂಗಾವಳಿ ನದಿಗೆ ನಿರ್ಮಿಸಿರುವ ಗಂಗಾವಳಿ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೋಕಾರ್ಪಣೆಗೊಳಿಸಿದರು.

ಮಂಜಗುಣಿಯಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿಳಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮೊದಲಾದವರು ಭವ್ಯ ಸ್ವಾಗತ ಕೋರಿದರು.

ಸೇತುವೆ ನಿರ್ಮಾಣ ಸ್ಥಳಕ್ಕೆ ಹಾಲಕ್ಕಿ ಸಮಾಜದ ಸಾಂಪ್ರದಾಯಿಕ ಗುಮಟೆ ವಾದನ, ಬಡಗು ಶೈಲಿಯ ಯಕ್ಷಗಾನ ನೃತ್ಯ ಪೂರ್ಣಕುಂಭ ಸ್ವಾಗತದೊಂದಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಿಲಾಫಲಕ ಅನಾವರಣಗೊಳಿಸಿ ವೇದಿಕೆಯಲ್ಲಿ ಕಲ್ಪವೃಕ್ಷದ ಸಿಂಗಾರ ಅರಳಿಸಿ ಸೇತುವೆಯ ಉದ್ಘಾಟನೆ ನೆರವೇರಿಸಿದರು.

ಕುಮಟಾ ಶಾಸಕ ದಿನಕರ ಶೆಟ್ಟಿ,ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಮಾಜಿ ಶಾಸಕಿ ಶಾರದಾ ಶೆಟ್ಟಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Must Read