ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ಹಿಂಸಾಚಾರಕ್ಕೆ ಕಾರಣವಾಗಿದ್ದ ಕುಖ್ಯಾತ ಮಾದಕ ವಸ್ತು ಸಂಘಟನೆಯ ನಾಯಕ ನೆಮೆಸಿಯೊ ಒಸೆಗುರಾ ಅಲಿಯಾಸ್ ‘ಎಲ್ ಮೆಂಚೊ’ ಸೈನ್ಯದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾನೆ.
ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಸಂಘಟನೆಯ 59 ವರ್ಷದ ಮುಖ್ಯಸ್ಥನಾಗಿದ್ದ ಆತ, ಜಾಲಿಸ್ಕೊ ರಾಜ್ಯದ ಟಪಲ್ಪಾ ಪಟ್ಟಣದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾನೆ. ಬಳಿಕ ಮೆಕ್ಸಿಕೋ ನಗರಕ್ಕೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾನೆ ಎಂದು ಸೇನೆ ತಿಳಿಸಿದೆ.
ಒಸೆಗುರಾ ತಲೆಗೆ ಸುಮಾರು 15 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಲಾಗಿತ್ತು. ಅವನ ಸಾವಿನ ಸುದ್ದಿಯ ನಂತರ ಪಶ್ಚಿಮ ಜಾಲಿಸ್ಕೊ ಪ್ರದೇಶದಲ್ಲಿ ಭಾರಿ ಅಶಾಂತಿ ಉಂಟಾಯಿತು. ಸಶಸ್ತ್ರ ಗುಂಪುಗಳು ಇಪ್ಪತ್ತಕ್ಕೂ ಹೆಚ್ಚು ರಸ್ತೆಗಳನ್ನು ತಡೆದು, ಅನೇಕ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಹಿಂಸಾಚಾರವು ಇತರ ರಾಜ್ಯಗಳಿಗೂ ವಿಸ್ತರಿಸಿದೆ.
ಇದನ್ನೂ ಓದಿ:
ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ನಾಗರಿಕರು ಶಾಂತವಾಗಿರಲು ಮನವಿ ಮಾಡಿ, ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
‘ಎಲ್ ಮೆಂಚೊ’ನ್ನು ಮೆಕ್ಸಿಕೋದಲ್ಲಿನ ಅತಿ ಪ್ರಭಾವಿ ಡ್ರಗ್ ನಾಯಕರಲ್ಲಿ ಒಬ್ಬನೆಂದು ಪರಿಗಣಿಸಲಾಗುತ್ತಿತ್ತು. ಸಿನಾಲೋವಾ ಕಾರ್ಟೆಲ್ ನಾಯಕರ ಬಂಧನದ ಬಳಿಕ ಅವನ ಪ್ರಭಾವ ಮತ್ತಷ್ಟು ಹೆಚ್ಚಾಗಿತ್ತು.



