October 9, 2026
Friday, October 9, 2026
spot_img

174 ಜೀವಗಳ ರಕ್ಷಕನಿಗೆ ಇಸ್ರೇಲ್‌ನ ಸಲಾಂ: ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ಶೌರ್ಯ ಪ್ರಶಸ್ತಿ ಗೌರವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನದಲ್ಲಿದ್ದ 174 ಪ್ರಯಾಣಿಕರ ಜೀವಕ್ಕೆ ಅಪಾಯ ಎದುರಾದ ಸಂದರ್ಭದಲ್ಲಿ ಧೈರ್ಯ ಮತ್ತು ವೃತ್ತಿಪರತೆಯಿಂದ ಕಾರ್ಯನಿರ್ವಹಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಶೌರ್ಯ ಗೌರವಗಳಲ್ಲಿ ಒಂದನ್ನು ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಈ ಘೋಷಣೆ ಮಾಡಿದ್ದಾರೆ.

ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದಿದ ದಾಳಿಯ ಸಂದರ್ಭದಲ್ಲಿ ಸ್ಮಿತ್ ಮಚ್ಚರ್ ತೋರಿದ ಧೈರ್ಯವನ್ನು ಹೆರ್ಜಾಗ್ ಶ್ಲಾಘಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪೈಲಟ್ ಸದ್ಯ ಅಬುಧಾಬಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚೇತರಿಸಿಕೊಂಡ ಬಳಿಕ ಇಸ್ರೇಲ್ ಜನರ ಪರವಾಗಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.

ಆರು ಇಸ್ರೇಲಿ ಪ್ರಯಾಣಿಕರಿಗೂ ಗೌರವ

ಘಟನೆ ವೇಳೆ ಪೈಲಟ್‌ಗೆ ನೆರವಾಗಿ ಸಂಭವನೀಯ ಭಾರೀ ವಿಮಾನ ದುರಂತವನ್ನು ತಪ್ಪಿಸಲು ಸಹಕರಿಸಿದ ಆರು ಇಸ್ರೇಲಿ ಪ್ರಯಾಣಿಕರಿಗೆ ಜೆರುಸಲೇಂನಲ್ಲಿ ನಡೆದ ಸಮಾರಂಭದಲ್ಲಿ ನಾಗರಿಕ ಶೌರ್ಯ ಪದಕ ಪ್ರದಾನ ಮಾಡಲಾಯಿತು. ತಲಿ ಮಾನೆಸ್, ಝ್ವಿಕಾ ಮಾನೆಸ್, ಯಾನಿವ್ ಹಯೂನ್, ವೈದ್ಯ ಶೋಟಾ ಮುಸಾಯೆವ್, ಅಸಫ್ ರಾಜುವಾನ್ ಮತ್ತು ಓರ್ ಪರ್ಡಿಲೋವ್ ಗೌರವಕ್ಕೆ ಪಾತ್ರರಾದರು.

ವಿಮಾನದಲ್ಲಿನ ತುರ್ತು ಪರಿಸ್ಥಿತಿಯನ್ನು ಗಮನಕ್ಕೆ ತಂದಿದ್ದರಿಂದ ಹಿಡಿದು, ಆರೋಪಿತ ದಾಳಿಕೋರನನ್ನು ನಿಯಂತ್ರಿಸಲು ನೆರವಾಗುವುದು ಮತ್ತು ಗಾಯಗೊಂಡ ಪೈಲಟ್‌ಗೆ ವೈದ್ಯಕೀಯ ನೆರವು ನೀಡುವವರೆಗೆ ಪ್ರಯಾಣಿಕರು ವಿವಿಧ ರೀತಿಯಲ್ಲಿ ಸಹಕರಿಸಿದ್ದರು ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ:

ಕಾಕ್‌ಪಿಟ್‌ನಲ್ಲಿ ನಡೆದಿದ್ದೇನು?

ವರದಿಗಳ ಪ್ರಕಾರ, ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಸಹಪೈಲಟ್ ಕ್ಯಾಪ್ಟನ್ ಮಚ್ಚರ್ ಮೇಲೆ ದಾಳಿ ನಡೆಸಿ ವಿಮಾನದವನ್ನು ಕೆಳಗೆ ಬೀಳಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ತುರ್ತು ಸಂಕೇತ ರವಾನಿಸಿದ ವಿಮಾನವು ಎತ್ತರದಿಂದ ವೇಗವಾಗಿ ಕೆಳಗಿಳಿದು, ಬಳಿಕ ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಘಟನೆಯ ಕುರಿತು ತನಿಖೆ ನಡೆಯಬೇಕಿದ್ದು, ಸಂಪೂರ್ಣ ಸತ್ಯಾಂಶಗಳು ಅಧಿಕೃತ ಪರಿಶೀಲನೆಯಿಂದ ಹೊರಬರಬೇಕಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಮಚ್ಚರ್ ಅಬುಧಾಬಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ಭಾರತೀಯ ರಾಯಭಾರ ಕಚೇರಿಯು ಅವರ ಕುಟುಂಬ ಮತ್ತು ಆಸ್ಪತ್ರೆಯೊಂದಿಗೆ ಸಂಪರ್ಕದಲ್ಲಿದೆ.

ಧೈರ್ಯಕ್ಕೆ ಅಂತಾರಾಷ್ಟ್ರೀಯ ಮನ್ನಣೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಈ ಹಿಂದೆ ಮಚ್ಚರ್ ಅವರೊಂದಿಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅಧ್ಯಕ್ಷರಿಂದಲೂ ಗೌರವ ಘೋಷಣೆಯಾಗಿರುವುದು ಭಾರತೀಯ ಪೈಲಟ್‌ನ ಸಾಹಸಕ್ಕೆ ದೊರೆತ ಅಂತಾರಾಷ್ಟ್ರೀಯ ಮನ್ನಣೆಯಾಗಿದೆ.

Must Read