ಹೊಸದಿಗಂತ ವರದಿ,ಮಂಡ್ಯ:
ಯುವತಿ ನಾಪತ್ತೆಗೆ ಕಾರಣರೆಂದು ಆರೋಪಿಸಿ ವ್ಯಕ್ತಿಯ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿದೆ.
ಮೈಸೂರಿನ ನವೀನ್ ಹಾಗೂ ಈತನ ಭಾವ ಪ್ರಕಾಶ್ ಮೇಲೆ ಕೆ.ಆರ್. ಪೇಟೆಯ ಬೊಮ್ಮಲಾಪುರ ಗ್ರಾಮದ ಗಿರೀಶ, ಪುಟ್ಟರಾಜು ಹಾಗೂ ಗಣೇಶ ಇತರರು ಹಲ್ಲೆ ನಡೆಸಿದ್ದಾರೆ.
ಘಟನೆ ವಿವರ :
ಕೆ.ಆರ್. ಪೇಟೆ ತಾಲೂಕು ಬೊಮ್ಮಲಾಪುರ ಗ್ರಾಮದ ನಿಂಗಣ್ಣ ಎಂಬುವರ ಮಗಳು ನಾಪತ್ತೆಯಾಗಿದ್ದು, ಈಕೆ ನಾಪತೆಗೆ ನವೀನ್ ಮತ್ತು ಈತನ ಬಾವ ಪ್ರಕಾಶ್‌ನೇ ಕಾರಣ ಎಂದು ಆರೋಪಿಸಿ ಹುಡುಗಿಯ ಸಹೋದರ ಸಂಜಯ್ ಎಂಬಾತ ಪ್ರಶ್ನೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ನವೀನ್‌ನ ಗುಂಪಿನವರು ಸಂಜಯ್ ಮೇಲೆ ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿದೆ.
ಇದರಿಂದ ಕುಪಿತಗೊಂಡ ಗಿರೀಶ್, ಗಣೇಶ್, ಪುಟ್ಟರಾಜು ಅವರುಗಳು ಡಿಂಕಾ ಗ್ರಾಮದ ಬಳಿ ಪ್ರಕಾಶ್ ಹಾಗೂ ನವೀನ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಪ್ರಕಾಶ ಎಂಬವರ ಕಾಲುಗಳ ಮೇಲೆ ದೊಡ್ಡ ಕಲ್ಲುನಿಂದ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾರೆ. ಕೈಮುಗಿದು ತಪ್ಪಾಯಿತು. ನನಗೂ ಚಿಕ್ಕ ಹೆಣ್ಣು ಮಗು ಇದೆ ಎಂದು ಬೇಡಿದರೂ ಬಿಡದ ಆರೋಪಿಗಳು ಆತನ ದೇಹದ ಮೇಲೆಯೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಿಂದಾಗಿ ಪ್ರಕಾಶ್‌ನ ಎರಡೂ ಕಾಲುಗಳು ಮುರಿದಿದೆ.
ತಕ್ಷಣ ಪ್ರಕಾಶ್‌ನನ್ನು ಪಾಂಡವಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ಮಾಡಿದ ಆರೋಪಿ ಗಿರೀಶ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಇತರೆ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಈ ಸಂಬಂಧ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.



