ಹೊಸದಿಗಂತ ವರದಿ ಮಂಗಳೂರು:
ಸಾರಿಗೆ ಕ್ಷೇತ್ರದ ಇತಿಹಾಸದ ಪುಟಗಳಲ್ಲಿ ಈಗಾಗಲೇ ಹಲವು ದಾಖಲೆ ಬರೆದಿರುವ ಮಂಗಳೂರು ನಗರ ಇದೀಗ ಮತ್ತೊಂದು ದಾಖಲೆ ಬರೆಯಲು ಸರ್ವ ರೀತಿಯಲ್ಲಿ ಸಜ್ಜಾಗಿದೆ.
ಈ ಹಿಂದೆ 1914ರಲ್ಲಿ ಮಂಗಳೂರು, ತನ್ನ ಪಕ್ಕದ ಬಂಟ್ವಾಳಕ್ಕೆ ಮೊದಲ ಖಾಸಗಿ ಬಸ್ ಸೇವೆ ಆರಂಭಿಸುವ ಮೂಲಕ ಕರಾವಳಿಯ ಸಾರಿಗೆಯಲ್ಲಿ ಹೊಸ ಅಧ್ಯಾಯ ಬರೆದಿತ್ತು. ಇದೀಗ ಅಂತಹದ್ದೇ ಇನ್ನೊಂದು ಐತಿಹಾಸಿಕ ಹೆಜ್ಜೆ ದಾಖಲಿಸಲು ಸಿದ್ಧತೆ ಖಾಸಗಿ ವಲಯದಿಂದ ನಡೆಯುತ್ತಿದೆ.

ನಗರದಲ್ಲಿ ಮೊಟ್ಟ ಮೊದಲ ಖಾಸಗಿ ಇಲೆಕ್ಟ್ರಿಕ್ ಬಸ್ ಓಡಾಟ ಆರಂಭಕ್ಕೆ ಈಗ ವೇದಿಕೆ ಸಜ್ಜಾಗಿದ್ದು, ಉದ್ಯಮಿ ದಿಲ್‌ರಾಜ್ ಆಳ್ವ ಅವರ ಮಾಲಕತ್ವದ ಬಸ್ ‘ಗಣೇಶ್ ಪ್ರಸಾದ್’ನ ಸ್ವಾಗತಕ್ಕೆ ನಗರದ ರೂಟ್ ನಂ.27ರ ಸಜ್ಜಾಗುತ್ತಿದೆ.
ಈ ಇ-ಬಸ್ ಒಟ್ಟು 9 ಮೀಟರ್ ಉದ್ದವಿದ್ದು, ಇದರಲ್ಲಿ 32ರಿಂದ 41 ಅತ್ಯಾಧುನಿಕ ಮಾದರಿಯ ಆಸನಗಳಿವೆ. ಒಂದೇ ಚಾರ್ಜ್‌ನಲ್ಲಿ ಇದು 200 ಕಿ.ಮೀ. ವರೆಗೆ ಸಂಚರಿಸಬಲ್ಲದು. ವಿಶೇಷವೆಂದರೆ ಕೇವಲ ಎರಡು ಗಂಟೆಗಳಲ್ಲಿ ಬ್ಯಾಟರಿ ಸಂಪೂರ್ಣ ರೀಚಾರ್ಜ್ ಆಗುತ್ತದೆ. ಇದಲ್ಲದೆ ಹವಾ ನಿಯಂತ್ರಿತ ವ್ಯವಸ್ಥೆ ಪ್ರಯಾಣಿಕರಿಗೆ ಸುಗಮ ಅನುಭವವನ್ನು ನೀಡಲಿವೆ. ಆತಕರ್ಷಕವಾಗಿರುವ ಈ ಬಸ್‌ನ ಬಾಡಿ ವಿನ್ಯಾಸವನ್ನು ಪುಣೆಯಲ್ಲಿ ನಡೆಸಲಾಗಿದೆ. ಪ್ರಾಯೋಗಿಕವಾಗಿ ಆರಂಭವಾಗುತ್ತಿರುವ ಈ ಪ್ರಯತ್ನ ಯಶಸ್ವಿಯಾದರೆ, ನಗರದಲ್ಲಿ ಇನ್ನಷ್ಟು ಇಲೆಕ್ಟ್ರಿಕ್ ಬಸ್‌ಗಳ ಓಡಾಟ ಕಾಣಿಸಿಕೊಳ್ಳಲಿದೆ.
ಬರಲಿದೆ ಕೆಎಸ್ಸಾರ್ಟಿಸಿ
ದೇಶಾದ್ಯಂತ ವಾಹನ ವಾಯು ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಚಾಲಿತ ಬಸ್‌ಗಳಿಗೆ ಒತ್ತು ನೀಡುತ್ತಿದೆ. ಪ್ರಧಾನ ಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ರಾಜ್ಯಕ್ಕೆ ಈಗಾಗಲೇ 750 ಇಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿವೆ. ಅವುಗಳಲ್ಲಿ 100 ಬಸ್‌ಗಳು ಮಂಗಳೂರಿಗೆ ಹಂಚಿಕೆ ಆಗಲಿವೆ. ಕುಂಟಿಕಾನದಲ್ಲಿರುವ ಕೆಎಸ್ಸಾರ್ಟಿಸಿ ಡಿಪೋ ಹಾಗೂ ಬಿಜೈ ಬಸ್ ನಿಲ್ದಾಣಗಳಲ್ಲಿ ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ಚಾರ್ಜಿಂಗ್ ಪಾಯಿಂಟ್‌ಗಳಿಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಇಲ್ಲಿ ಎಲ್ಲವೂ ನಿರೀಕ್ಷೆಯಂತೆ ನಡೆದರೆ, ಮುಂದಿನ ಆರು ತಿಂಗಳೊಳಗೆ ನಗರದಲ್ಲಿ ಸರ್ಕಾರಿ ಇಲೆಕ್ಟ್ರಿಕ್ ಬಸ್‌ಗಳೂ ಸಂಚಾರ ಆರಂಭಿಸಲಿವೆ.



