September 27, 2026
Sunday, September 27, 2026
spot_img

ಸದನದಲ್ಲಿ ಸುಳ್ಳು ಮಾಹಿತಿ? ಸಿಎಂ ನೀಡಿದ 40,000 ಹುದ್ದೆಗಳ ಲೆಕ್ಕಾಚಾರ ಪ್ರಶ್ನಿಸಿದ ಸಿ.ಟಿ.ರವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಅಂಕಿ-ಅಂಶಗಳ ಸಮರ ಶುರುವಾಗಿದೆ. “ಕಾಂಗ್ರೆಸ್ ಸರ್ಕಾರ 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಅಧಿಕೃತ ಅಂಕಿ-ಅಂಶಗಳ ದಾಖಲೆಯನ್ನು ಹಂಚಿಕೊಂಡಿರುವ ಸಿ.ಟಿ. ರವಿ, ಸಿಎಂ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಭರ್ತಿಯಾಗಿರುವುದು ಕೇವಲ 8,157 ಹುದ್ದೆಗಳು ಮಾತ್ರ. ಇನ್ನೂ 3,081 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹಂತದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯನವರು ಹೇಳುತ್ತಿರುವ 40,000 ಹುದ್ದೆಗಳು ಯಾರಿಗೆ ಹೋಗಿವೆ?” ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಸದ್ಯ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಉದ್ಯೋಗಕ್ಕಾಗಿ ಯುವಜನತೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇಂತಹ ಗಂಭೀರ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳೇ ಸದನದಲ್ಲಿ ತಪ್ಪು ಮಾಹಿತಿ ನೀಡುವುದು ಯುವ ಸಮೂಹಕ್ಕೆ ಮಾಡುವ ದ್ರೋಹ ಎಂದು ಅವರು ಕಿಡಿಕಾರಿದ್ದಾರೆ.

“ಸಿಎಂ ಬಾಯಿ ಬಿಟ್ಟರೆ ಹಸಿ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರಿ ಅಂಕಿ-ಅಂಶಗಳೇ ಅವರ ಹೇಳಿಕೆಯನ್ನು ಸುಳ್ಳೆಂದು ಸಾಬೀತುಪಡಿಸುತ್ತಿವೆ. ವಾಸ್ತವ ಮರೆಮಾಚಿ ಪ್ರಚಾರ ಪಡೆಯುತ್ತಿರುವ ಸರ್ಕಾರದ ನೀತಿ ಖಂಡನೀಯ” ಎಂದು ಸಿ.ಟಿ. ರವಿ ಗುಡುಗಿದ್ದಾರೆ.

Must Read