ಹೊಸದಿಗಂತ, ಉಳ್ಳಾಲ:
ಹೆಲ್ಮೆಟ್ ರಹಿತ ಚಾಲನೆಯಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಲೇ ಇವೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದೆಂಬ ಕಳಕಳಿಯಿಂದ ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ಎಕ್ಕೂರು ಎಂಬವರು ಎಚ್ಚರಿಕೆಯ ಸಂದೇಶಗಳೊಂದಿಗೆ ಅದೃಷ್ಟ ಸಂಖ್ಯೆಗಳನ್ನೊಳಗೊಂಡ ಕರಪತ್ರಗಳನ್ನ ದ್ವಿಚಕ್ರ ವಾಹನಸವಾರರು, ಸಾರ್ವಜನಿಕರಿಗೆ ಹಂಚುವ ಮೂಲಕ ಕೈಗೊಂಡಿರುವ ವಿಭಿನ್ನ ರೀತಿಯ ಜಾಗೃತಿ ಅಭಿಯಾನವೊಂದು ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟಿನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಭಾನುವಾರ ಜಯಪ್ರಕಾಶ್, ವಿದ್ಯಾರ್ಥಿಗಳೊಂದಿಗೆ ತೊಕ್ಕೊಟ್ಟು ಹೃದಯಭಾಗದ ಬಸ್ಸು ನಿಲ್ದಾಣ, ಫ್ಲೈ ಓವರ್ ಕೆಳಭಾಗಗಳಲ್ಲಿ ಟ್ರಾಫಿಕ್ ಪೊಲೀಸರು, ವಾಹನ ಸವಾರರು, ವರ್ತಕರಿಗೆ ಕರಪತ್ರಗಳನ್ನ ಹಂಚಿ ವಿಶೇಷ ಜಾಗೃತಿ ಅಭಿಯಾನ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಅನೇಕ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದ ಕಾರಣಕ್ಕಾಗಿಯೇ ಸಾವು, ನೋವುಗಳು ಸಂಭವಿಸಿವೆ. ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸಬಾರದೆಂಬ ಕಳಕಳಿಯಿಂದ ಈ ಕರಪತ್ರ ಅಭಿಯಾನವನ್ನು ನಾವು ಹಮ್ಮಿಕೊಂಡಿದ್ದೇವೆ. ಸಾಮಾನ್ಯವಾಗಿರುವ ಕರಪತ್ರಗಳನ್ನ ಕೊಟ್ಟರೆ ಜನರು ತಕ್ಷಣವೇ ಅದನ್ನು ಎಸೆಯುತ್ತಾರೆ. ಅದಕ್ಕಾಗಿ ಕರಪತ್ರಗಳಲ್ಲಿ ಅದೃಷ್ಟ ಸಂಖ್ಯೆಗಳನ್ನ ಮುದ್ರಿಸಲಾಗಿದ್ದು, ಅ.10 ರಂದು ನಡೆಯುವ ಡ್ರಾ ಫಲಿತಾಂಶದಲ್ಲಿ ಅದೃಷ್ಟಶಾಲಿಯನ್ನ ಆಯ್ಕೆ ಮಾಡಲಿದ್ದೇವೆ. ಅದೃಷ್ಟಶಾಲಿಗೆ ಹೆಲ್ಮೆಟನ್ನೇ ಬಹುಮಾನವಾಗಿ ನೀಡಲಿದ್ದೇವೆ. ಕರಪತ್ರಗಳು ಲಕ್ಕಿಡಿಪ್ ರೂಪದಲ್ಲಿ ಇದ್ದರೆ ಜನರು ಅದನ್ನ ಬಿಸಾಡದೆ ಸಂಪೂರ್ಣವಾಗಿ ಓದುತ್ತಾರೆ. ಇದರಿಂದ ನಾವು ಕೊಟ್ಟಿರುವ ಎಚ್ಚರಿಕೆಯ ಸಂದೇಶಗಳು ಒಂದಷ್ಟು ಜನರಿಗೆ ತಲುಪಿ ಸಮಾಜ ಜಾಗೃತಗೊಳ್ಳಲು ಸಾಧ್ಯವಿದೆ. ಪ್ರಸ್ತುತ ಎರಡು ಸಾವಿರ ಪ್ರತಿ ಕರಪತ್ರಗಳನ್ನ ಮುದ್ರಿಸಿದ್ದು, ಇದನ್ನು ಉಳ್ಳಾಲದ ವಿವಿಧ ಭಾಗಗಳಲ್ಲಿ ಹಂಚಲಿದ್ದೇವೆ. ಜನರು ನಮಗೆ ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ. ಬರುವ ವಾರವೂ ಕರಪತ್ರ ಹಂಚುವ ಅಭಿಯಾನ ನಡೆಸಲಿದ್ದೇವೆಯೆಂದು ಜಯಪ್ರಕಾಶ್ ತಿಳಿಸಿದರು. ವಿದ್ಯಾರ್ಥಿಗಳಾದ ಪಲ್ಲವಿ,ನೇತ್ರ, ಗಗನ್ ಕರಪತ್ರ ಅಭಿಯಾನದಲ್ಲಿ ಅವರಿಗೆ ಸಾಥ್ ನೀಡಿದ್ದಾರೆ.



