August 31, 2026
Monday, August 31, 2026
spot_img

ಚಿತ್ರದುರ್ಗ ಪೊಲೀಸರ ಭರ್ಜರಿ ಬೇಟೆ: ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿ ಕಡೆಗೂ ಅರೆಸ್ಟ್

ಹೊಸದಿಗಂತ ಚಿತ್ರದುರ್ಗ:

ನಗರದ ಸಂತೆಹೊಂಡದ ಸಮೀಪವಿರುವ ‘ಚೌಧರಿ ಮೊಬೈಲ್ ಶಾಪ್’ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಯನ್ನು ಚಿತ್ರದುರ್ಗ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಮೊಬೈಲ್ ಶಾಪ್ ಮಾಲೀಕ ವಿಕ್ರಮ್ ಚೌಧರಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಆರೋಪಿ ಪತ್ತೆಗಾಗಿ ತಕ್ಷಣವೇ ಎರಡು ವಿಶೇಷ ತಂಡಗಳನ್ನು ರಚಿಸಿದ್ದರು.

ಗ್ರಾಮಾಂತರ ಠಾಣೆಯ ಪಿ.ಐ. ಬಾಲಚಂದ್ರನಾಯ್ಕ್ ಹಾಗೂ ಮಹಿಳಾ ಠಾಣೆಯ ಪಿ.ಐ. ನಯೀಂ ಅಹಮ್ಮದ್ ನೇತೃತ್ವದ ತಂಡಗಳು ಚುರುಕಿನ ಕಾರ್ಯಾಚರಣೆ ನಡೆಸಿವೆ. ನಗರ ಠಾಣೆಯ ಸಿಬ್ಬಂದಿಗಳ ನೆರವಿನೊಂದಿಗೆ ತಾಂತ್ರಿಕ ಮಾಹಿತಿ ಹಾಗೂ ಸುಳಿವುಗಳನ್ನು ಆಧರಿಸಿ, ಜೆಸಿಆರ್ ಬಡಾವಣೆಯ 3ನೇ ಕ್ರಾಸ್ ನಿವಾಸಿ ಮಹಮ್ಮದ್ ಅಮರ್ (24) ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹಲ್ಲೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !