September 27, 2026
Sunday, September 27, 2026
spot_img

ಸತ್ತವರ ಹೆಸರಲ್ಲಿ ಕೋಟಿ ಕೋಟಿ ಲೂಟಿ: ಗ್ಯಾರಂಟಿ ಯೋಜನೆಗಳಿಗೆ ಸರ್ಜರಿ ಮಾಡ್ತಾರಾ ಡಿಸಿಎಂ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಭವಿಷ್ಯದ ಬಗ್ಗೆ ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೆರೆ ಎಳೆದಿದ್ದಾರೆ. “ಗ್ಯಾರಂಟಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವುದು ನಿಜ, ಆದರೆ ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ನಾವು ನಿಲ್ಲಿಸುವುದಿಲ್ಲ” ಎಂದು ಅವರು ದೃಢವಾಗಿ ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ತಾಂತ್ರಿಕ ಲೋಪಗಳು ಮತ್ತು ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಮೃತಪಟ್ಟವರ ಹೆಸರಿನಲ್ಲಿ ಇಂದಿಗೂ ಗ್ಯಾರಂಟಿ ಹಣ ಮತ್ತು ಪಡಿತರ ಅಕ್ಕಿಯನ್ನು ಪಡೆಯಲಾಗುತ್ತಿದೆ. ಇದು ಸರ್ಕಾರದ ಕೋಟ್ಯಂತರ ರೂಪಾಯಿ ನಷ್ಟಕ್ಕೆ ಕಾರಣವಾಗುತ್ತಿದೆ.

ಗೃಹಜ್ಯೋತಿ ಯೋಜನೆಯಲ್ಲಿ ಈ ಸಮಸ್ಯೆ ಇಲ್ಲದಿದ್ದರೂ, ಉಳಿದ ಯೋಜನೆಗಳಲ್ಲಿ ಮೃತರ ಲೆಕ್ಕ ಸಿಗುತ್ತಿಲ್ಲ. ಈ ಅನಗತ್ಯ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚರ್ಚೆ ನಡೆಸುತ್ತಿದೆ.

ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲು ಬದ್ಧವಾಗಿದೆ. ಆದರೆ, ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವಂತೆ ಮಾಡಲು ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸೂಚನೆಯನ್ನು ಡಿ.ಕೆ. ಶಿವಕುಮಾರ್ ನೀಡಿದ್ದಾರೆ.

Must Read