ಹೊಸದಿಗಂತ ವರದಿ ರಾಮನಗರ:
ಬರಪೀಡಿತ ಪಟ್ಟಿಯಿಂದ ಹೊರಗುಳಿದ ತಾಲ್ಲೂಕುಗಳನ್ನೂ ಬರಪೀಡಿತವೆಂದು ಘೋಷಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಸೇರಿದಂತೆ 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸೆ.28ರಂದು ಶವಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆಣೆಗೆರೆ ಕೆ. ಮಲ್ಲಯ್ಯ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರ ಜ್ವಲಂತ ಸಮಸ್ಯೆಗಳ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯುವ ಉದ್ದೇಶದಿಂದ ರಾಜ್ಯದಾದ್ಯಂತ ಶವಯಾತ್ರೆ ನಡೆಸಲಾಗುತ್ತಿದೆ. ಅದರಂತೆ ಸೆ.28ರಂದು ನಗರದ ಎಪಿಎಂಸಿಯಲ್ಲಿರುವ ರೈತ ಭವನದಿಂದ ಐಜೂರು ವೃತ್ತದ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿವರೆಗೆ ಶವಯಾತ್ರೆ ನಡೆಸಲಾಗುವುದು ಎಂದರು.
ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳು ಜಡ್ಡುಗಟ್ಟಿದ್ದು, ರೈತರ ಕುಂದುಕೊರತೆ ಸಭೆಗಳನ್ನು ನಡೆಸುತ್ತಿಲ್ಲ. ಚನ್ನಪಟ್ಟಣ ತಹಶೀಲ್ದಾರ್ ಅವರು ಸರ್ಕಾರಿ ನಿವಾಸವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳಿದ್ದು, ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಚ್.ಸಿ. ಕೃಷ್ಣಯ್ಯ ಮಾತನಾಡಿ, ರೈತರ ಬದುಕಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ನಡೆಯಲಿರುವ ಈ ಪ್ರತಿಭಟನೆಯಲ್ಲಿ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ರೈತರು ಧ್ವನಿ ಎತ್ತದಿದ್ದರೆ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಮುಂದುವರಿಸುವ ಸಾಧ್ಯತೆ ಇದೆ ಎಂದರು.
ರೈತ ಸಂಘದ ಮುಖಂಡ ಕುಮಾರಸ್ವಾಮಿ ಮಾತನಾಡಿ, ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ರೈತರು ಕಳೆದ 18 ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ರೈತರ ಹೋರಾಟಕ್ಕೆ ಸ್ಪಂದಿಸಿ ಯೋಜನೆಯನ್ನು ಕೈಬಿಡಬೇಕು. ಭೂಸ್ವಾಧೀನಕ್ಕೆ ಈಗಾಗಲೇ ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸರ್ಕಾರ ನಡೆಸುತ್ತಿರುವ ವಿಶೇಷ ಅಧಿವೇಶನದಲ್ಲಿ ಬರ ಹಾಗೂ ರೈತರ ಸಮಸ್ಯೆಗಳ ಕುರಿತು ಸಮರ್ಪಕವಾಗಿ ಚರ್ಚೆ ನಡೆದಿಲ್ಲ. ಬಿಡದಿ ಟೌನ್ಶಿಪ್ ಯೋಜನೆ ಬಗ್ಗೆಯೂ ಯಾವ ಶಾಸಕರೂ ಚಕಾರ ಎತ್ತಿಲ್ಲ. ಹೀಗಾಗಿ ಬರ, ರೈತರ ಸಮಸ್ಯೆ ಹಾಗೂ ಬಿಡದಿ ಟೌನ್ಶಿಪ್ ಯೋಜನೆ ಕುರಿತು ಸಮಗ್ರ ಚರ್ಚೆ ನಡೆಸಲು ಅಧಿವೇಶನವನ್ನು ಇನ್ನೂ ಒಂದು ವಾರ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ತಿಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ನಾಗರಾಜು, ಕಾರ್ಯದರ್ಶಿ ವೆಂಕಟೇಶ್, ಸಂಚಾಲಕ ಶಿವಪ್ಪ, ಮಹಿಳಾ ಘಟಕದ ಸಂಚಾಲಕಿ ರಮ್ಯ ರಾಮಣ್ಣ, ಅಧ್ಯಕ್ಷೆ ರತ್ನಮ್ಮ, ಮುಖಂಡರಾದ ವಿಜಯಕುಮಾರ್, ಬಾಲರಾಜು, ಪ್ರಶಾಂತ್ ಹಾಗೂ ಶಿವಲಿಂಗಯ್ಯ ಇದ್ದರು.
ರೈತ ಸಂಘದ 18 ಬೇಡಿಕೆಗಳು:
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ, ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು.
ಸಾಲಮನ್ನಾ ಮಾಡುವವರೆಗೆ ಬ್ಯಾಂಕ್ಗಳಿಂದ ಸಾಲ ವಸೂಲಿ ನಿಲ್ಲಿಸಬೇಕು.
ರೈತರ ಪಂಪ್ಸೆಟ್ಗಳಿಗೆ ಕನಿಷ್ಠ ಏಳು ಗಂಟೆ ವಿದ್ಯುತ್ ಪೂರೈಸಬೇಕು.
ಕೆರೆ–ಕಟ್ಟೆಗಳಿಗೆ ನೀರು ತುಂಬಿಸಬೇಕು.
ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು ಹಾಗೂ ವಿಮಾ ಪರಿಹಾರ ಪಾವತಿಸಬೇಕು.
ಕುಡಿಯುವ ನೀರು ಪೂರೈಕೆ ಮಾಡಬೇಕು. ಜಾನುವಾರುಗಳಿಗೆ ಉಂಟಾಗಿರುವ ಮೇವು ಕೊರತೆ ನೀಗಿಸಬೇಕು.
ಬೆಂಬಲ ಬೆಲೆಯಡಿ ಖರೀದಿಸಿರುವ ರಾಗಿ, ಭತ್ತ ಹಾಗೂ ಜೋಳದ ಹಣವನ್ನು ಕೂಡಲೇ ಪಾವತಿಸಬೇಕು.
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಸರಳವಾಗಿ ದಸರಾ ಆಚರಿಸಬೇಕು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸದಂತೆ ವಿಧಿಸಿರುವ ನಿಷೇಧಾಜ್ಞೆ ಹಿಂಪಡೆಯಬೇಕು.
ತಹಶೀಲ್ದಾರರು ರೈತರ ಕುಂದುಕೊರತೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು.
ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸಬೇಕು.
1994ಕ್ಕೂ ಮೊದಲು ಅಕ್ರಮ ಸಾಗುವಳಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು.
ಸರ್ಕಾರಿ ನಿವಾಸ ದುರುಪಯೋಗ ಹಾಗೂ ಅಧಿಕಾರ ದುರುಪಯೋಗದ ಆರೋಪ ಎದುರಿಸುತ್ತಿರುವ ಚನ್ನಪಟ್ಟಣ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಬೇಕು.



