ಹೊಸದಿಗಂತ ಅಂಕೋಲಾ:
ತಾಲೂಕಿನ ಅಗ್ರಗೋಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ಹಿಡಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಬಳಿ ಬಾಲಕಿಯ ಉಡುಪು ಪತ್ತೆಯಾಗಿರುವುದು ಮತ್ತು ಆತ ಪದೇ ಪದೇ ಹೇಳಿಕೆ ಬದಲಿಸುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಅರಣ್ಯ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಅಡಗಿ ಕುಳಿತಿದ್ದ ಈ ವ್ಯಕ್ತಿಯನ್ನು ಗಮನಿಸಿದ ಗ್ರಾಮಸ್ಥರು ಆತನನ್ನು ಪ್ರಶ್ನಿಸಿದ್ದಾರೆ. ಬಿಹಾರಿ ಶೈಲಿಯ ಹಿಂದಿ ಮಾತನಾಡುತ್ತಿದ್ದ ಈತ, ವಿಚಾರಣೆ ವೇಳೆ ಗೊಂದಲಕಾರಿ ಉತ್ತರಗಳನ್ನು ನೀಡಿದ್ದಾನೆ.
ಈತನ ಬಳಿ ಬಾಲಕಿಯೊಬ್ಬಳ ಉಡುಪು ಪತ್ತೆಯಾಗಿರುವುದು ಪೋಷಕರ ನಿದ್ದೆಗೆಡಿಸಿದೆ. ಶಾಲೆ ಬಿಟ್ಟು ಮನೆಗೆ ಮರಳುವ ಮಕ್ಕಳನ್ನು ಗುರಿಯಾಗಿಸಿಕೊಂಡು ಈತ ಸಂಚು ರೂಪಿಸಿದ್ದನೇ ಎಂಬ ಸಂಶಯ ವ್ಯಕ್ತವಾಗಿದೆ.
ಒಮ್ಮೆ ತಾನು ರಂಜಾನ್ ಉಪವಾಸವಿದ್ದು ಜಮಾತ್‌ಗಾಗಿ ಬಂದಿರುವುದಾಗಿ ಹೇಳಿದರೆ, ಮತ್ತೊಮ್ಮೆ ಕೇವಲ ಪ್ರಕೃತಿ ಸೌಂದರ್ಯ ಸವಿಯಲು ಬಂದಿರುವುದಾಗಿ ಹಾರಿಕೆಯ ಉತ್ತರ ನೀಡಿದ್ದಾನೆ. ಕೆಲವೊಮ್ಮೆ ಮಾನಸಿಕ ಅಸ್ವಸ್ಥನಂತೆ ನಟಿಸಿ ದಾರಿ ತಪ್ಪಿಸಲು ಯತ್ನಿಸಿದ್ದಾನೆ.
ರಂಜಾನ್ ಹಿನ್ನೆಲೆಯಲ್ಲಿ ಅನೇಕರು ಆರ್ಥಿಕ ನೆರವು ಕೋರಿ ಬರುತ್ತಿರುವುದರಿಂದ ಮೊದಮೊದಲು ಗ್ರಾಮಸ್ಥರು ಈತನನ್ನು ನಿರ್ಲಕ್ಷಿಸಿದ್ದರು. ಆದರೆ ನಿರ್ಜನ ಪ್ರದೇಶದಲ್ಲಿ ಮಾಸ್ಕ್ ಧರಿಸಿ ಸಂಶಯಾಸ್ಪದವಾಗಿ ಕುಳಿತಿದ್ದನ್ನು ಕಂಡ ಮುಸ್ಲಿಂ ಸಮುದಾಯದವರು ಸೇರಿದಂತೆ ಸ್ಥಳೀಯರು ಒಗ್ಗೂಡಿ ಆತನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.



