February 27, 2026
Friday, February 27, 2026
spot_img

ಕ್ಲಾಸ್‌ರೂಮ್‌ನಲ್ಲಿ ಮೊಬೈಲ್ ಬ್ಯಾನ್ ಕಸರತ್ತು: ‘ನಮ್ಮ ಅಭಿಪ್ರಾಯವನ್ನೂ ಕೇಳಿ’ ಎಂದ ಮಕ್ಕಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವ ಸರ್ಕಾರದ ಚಿಂತನೆಗೆ ಈಗ ಹೊಸ ತಿರುವು ಸಿಕ್ಕಿದೆ. ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವತಃ ಮಕ್ಕಳ ಅಭಿಪ್ರಾಯವನ್ನೂ ಪಡೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಮಕ್ಕಳ ಹಕ್ಕುಗಳ ಹೋರಾಟಗಾರ ನಾಗಸಿಂಹ ಅವರು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಈ ವಿಷಯದ ಬಗ್ಗೆ ತಜ್ಞರ ಸಮಿತಿ ರಚಿಸಲು ಮುಂದಾಗಿರುವುದು ಸ್ವಾಗತಾರ್ಹ, ಆದರೆ ಈ ಪ್ರಕ್ರಿಯೆಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಇಲ್ಲದಿರುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ. “ಮಕ್ಕಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಅವರ ಅಭಿಪ್ರಾಯಗಳನ್ನು ಹೇಳುವ ಹಕ್ಕು ಅವರಿಗಿದೆ. ಅವರ ವಯಸ್ಸು ಮತ್ತು ಪ್ರಬುದ್ಧತೆಗೆ ತಕ್ಕಂತೆ ಆ ಅಭಿಪ್ರಾಯಗಳನ್ನು ಗೌರವಿಸಬೇಕು,” ಎಂದು ನಾಗಸಿಂಹ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮೊಬೈಲ್ ನಿಷೇಧದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಕ್ಕಳ ಕೈಗೆ ಮೊಬೈಲ್ ನೀಡುವಲ್ಲಿ ಪೋಷಕರ ಜವಾಬ್ದಾರಿಯೂ ಇದೆ, ಸಮಸ್ಯೆ ಅಲ್ಲಿಂದಲೇ ಶುರುವಾಗುತ್ತಿದೆ ಎಂಬುದು ಸಚಿವರ ಅಭಿಪ್ರಾಯ.

ಈ ಬಗ್ಗೆ ಪೋಷಕರೊಂದಿಗೆ ಅಥವಾ ಮಕ್ಕಳೊಂದಿಗೆ ಸಭೆ ನಡೆಸಬೇಕೆ ಎಂಬ ಬಗ್ಗೆ ಶೀಘ್ರವೇ ತೀರ್ಮಾನಿಸಲಾಗುವುದು. ಮುಖ್ಯಮಂತ್ರಿಗಳ ಸಲಹೆಯಂತೆ ಸಮಗ್ರ ಚರ್ಚೆ ನಡೆಸಿ, ಮಕ್ಕಳ ಹಿತದೃಷ್ಟಿಯಿಂದಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !