ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪಾದಯಾತ್ರೆ ಸಮರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ರಾಜ್ಯ ಸರ್ಕಾರದ ಭೂಸ್ವಾಧೀನ ನೀತಿಯನ್ನು ವಿರೋಧಿಸಿ ಬಿಡದಿಯಿಂದ ಬೆಂಗಳೂರಿಗೆ 2 ದಿನಗಳ ಕಾಲ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ಯೋಜನೆಗಳ ವಿರುದ್ಧ ಪ್ರತಿಭಟನೆ:
ರಾಮನಗರ ಜಿಲ್ಲೆಯ ಬಿಡದಿ ಬಳಿ ಉದ್ದೇಶಿತ ಬಿಡದಿ ಸ್ಮಾರ್ಟ್ ಟೌನ್‌ಶಿಪ್ ಯೋಜನೆ ಮತ್ತು ಕನಕಪುರ ಭಾಗದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ನೂತನ ಏರ್‌ಪೋರ್ಟ್ ಯೋಜನೆಯನ್ನು ವಿರೋಧಿಸಿ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರವು ಈ ಯೋಜನೆಗಳ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಇದನ್ನೂ ಓದಿ:
ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ:
ಈ ಪಾದಯಾತ್ರೆಯು ಕೇವಲ ಬಿಜೆಪಿ ಮಾತ್ರವಲ್ಲದೆ, ಮೈತ್ರಿ ಪಕ್ಷವಾದ ಜೆಡಿಎಸ್ ಜೊತೆಗೂಡಿ ಜಂಟಿಯಾಗಿ ನಡೆಯಲಿದೆ. ರೈತರ ಹಿತರಕ್ಷಣೆ ಕಾಯುವ ಸಲುವಾಗಿ ಮತ್ತು ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿ ಈ ಜಂಟಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ. ಈ 2 ದಿನಗಳ ಬೃಹತ್ ಪಾದಯಾತ್ರೆಯು ಬಿಡದಿಯಿಂದ ಆರಂಭವಾಗಿ ಬೆಂಗಳೂರಿನಲ್ಲಿ ಸಮಾವೇಶಗೊಳ್ಳಲಿದೆ.
ಈ ಪಾದಯಾತ್ರೆಯು ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.



