ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರ್ಚ್ 1 ರಿಂದ ಭಾರತದಲ್ಲಿ ಮೆಸೇಜಿಂಗ್ ಆ್ಯಪ್‌ಗಳ ಬಳಕೆಯ ನಿಯಮಗಳಲ್ಲಿ ಬದಲಾವಣೆಯಾಗಲಿದ್ದು,ಇನ್ಮುಂದೆ ನೀವು ಬಳಸುವ ಫೋನ್ ನಲ್ಲಿ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಖಾತೆಗಳು ಸಕ್ರಿಯವಾಗಿ ಇರಬೇಕಾದರೆ, ನಿಮ್ಮ ಮೊಬೈಲ್ ಫೋನ್‌ನಲ್ಲಿ ಅದೇ ನಂಬರ್‌ನ ಸಿಮ್ ಕಾರ್ಡ್ ಇರಬೇಕು. ಇಲ್ಲವಾದರೆ ಖಾತೆಗಳು ಕೆಲಸ ಮಾಡುವುದನ್ನೇ ನಿಲ್ಲಿಸಲಿವೆ.
ಹೌದು, ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಟೆಲಿಕಾಂ ಕಾಯ್ದೆ 2023ರ ಅಡಿಯಲ್ಲಿ ಹೊಸ ನಿಯಮ ಜಾರಿಗೆ ತಂದಿದೆ. ಈ ಮೊದಲು ನಾವು ಒಂದು ಫೋನ್‌ನಲ್ಲಿ ಸಿಮ್ ಹಾಕಿ, ಒಮ್ಮೆ ಒಟಿಪಿ ಪಡೆದು ವಾಟ್ಸಾಪ್ ಇನ್‌ಸ್ಟಾಲ್ ಮಾಡಿದರೆ, ಆ ನಂತರ ಸಿಮ್ ಕಾರ್ಡ್ ಅನ್ನು ತೆಗೆದು ಬೇರೆ ಫೋನ್‌ಗೆ ಹಾಕಿದರೂ ಮೊದಲ ಫೋನ್‌ನಲ್ಲಿ ವಾಟ್ಸಾಪ್ ಸರಳವಾಗಿ ಕೆಲಸ ಮಾಡುತ್ತಿತ್ತು. ಆದರೆ, ಇನ್ನು ಮುಂದೆ ಸರ್ಕಾರವು ಸೈಬರ್ ಭದ್ರತೆಯನ್ನು ಹೆಚ್ಚಿಸಲು ಮತ್ತು ಆನ್‌ಲೈನ್ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ನವೆಂಬರ್ 28, 2025 ರಂದು ದೂರಸಂಪರ್ಕ ಇಲಾಖೆಯ ಟೆಲಿಕಾಂ ಸೈಬರ್ ಸೆಕ್ಯುರಿಟಿ ರೂಲ್ಸ್ ಮತ್ತು ಟೆಲಿಕಮ್ಯುನಿಕೇಶನ್ಸ್ ಆಕ್ಟ್ 2023 ರ ಅಡಿಯಲ್ಲಿ ಹೊಸ ನಿಯಮ ಜಾರಿಗೆ ತಂದಿದ್ದು, ಮೆಸೇಜಿಂಗ್ ಅಪ್ಲಿಕೇಶನ್‌ಗಳಾದ ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್ ಮತ್ತು ಸ್ನ್ಯಾಪ್‌ಚಾಟ್ ಮುಂತಾದವುಗಳು ನಿರಂತರವಾಗಿ ನಿಮ್ಮ ಫೋನ್‌ನಲ್ಲಿ ಸಿಮ್ ಕಾರ್ಡ್ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತಲೇ ಇರುತ್ತವೆ.
ನೀವು ಸಿಮ್ ಕಾರ್ಡ್ ಅನ್ನು ತೆಗೆದರೆ, ಸಿಮ್ ಸ್ವಾಪ್ ಮಾಡಿದರೆ, ಸಿಮ್ ಡ್ಯಾಮೇಜ್ ಆಗಿದ್ದರೆ ಅಥವಾ ನಿಷ್ಕ್ರಿಯಗೊಂಡರೆ, ಆ ಕ್ಷಣವೇ ನಿಮ್ಮ ಮೆಸೇಜಿಂಗ್ ಆ್ಯಪ್ ಖಾತೆಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.
ಈ ನಿಯಮವು ಭಾರತೀಯ ನಂಬರ್‌ಗಳಿಗೆ ಅನ್ವಯವಾಗಲಿದ್ದು, ಅಂದ್ರೇ +91 ನಂಬರ್‌ಗಳಿಗೆ ಅಪ್ಲೈ ಆಗಲಿದ್ದು, ತಂತ್ರಜ್ಞಾನ ಕಂಪನಿಗಳಿಗೆ ನಿಯಮ ಪಾಲಿಸಲು 90 ದಿನಗಳ ಕಾಲಾವಕಾಶ ನೀಡಲಾಗಿತ್ತು, ಈಗ ಆ ಗಡುವು ಮುಗಿದಿದೆ.
ವಾಟ್ಸಾಪ್ ವೆಬ್ ಕೂಡ ಆಟೋ-ಲಾಗ್ ಔಟ್
ಇನ್ಮುಂದೆ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ವಾಟ್ಸಾಪ್ ವೆಬ್ ಬಳಸುವ ವೃತ್ತಿಪರರು ಮತ್ತು ಕಚೇರಿ ಉದ್ಯೋಗಿಗಳಿಗೂ ಹೊಸ ನಿಯಮ ಬರಲಿದ್ದು, ಪ್ರಸ್ತುತ ಒಮ್ಮೆ ನೀವು ಲ್ಯಾಪ್‌ಟಾಪ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಾಟ್ಸಾಪ್ ವೆಬ್ ಲಾಗಿನ್ ಆದರೆ, ದಿನಗಟ್ಟಲೆ ಅಥವಾ ತಿಂಗಳುಗಟ್ಟಲೆ ಅದು ಲಾಗಿನ್ ಆಗಿಯೇ ಇರುತ್ತಿತ್ತು. ಆದರೆ,ಇನ್ಮುಂದೆ ವಾಟ್ಸಾಪ್ ವೆಬ್ ಮತ್ತು ಡೆಸ್ಕ್‌ಟಾಪ್ ಸೆಷನ್‌ಗಳು ಪ್ರತಿ 6 ಗಂಟೆಗಳಿಗೊಮ್ಮೆ ತಾನಾಗಿಯೇ ಲಾಗ್ ಔಟ್ ಆಗಲಿವೆ. ಆದರೆ, ನಿಮ್ಮ ಪ್ರಾಥಮಿಕ ಮೊಬೈಲ್‌ನಲ್ಲಿ ಸಿಮ್ ಇದ್ದರೆ ಆ ಮೊಬೈಲ್ ಆ್ಯಪ್ ಬಳಕೆಗೆ ಯಾವುದೇ ತೊಂದರೆ ಇರುವುದಿಲ್ಲ.
ಈ ರೂಲ್ಸ್ ಜಾರಿಗೆ ಕಾರಣವೇನು? ಕೇಂದ್ರ ಸರಕಾರ ಈ ಕಠಿಣ ನಿಯಮವನ್ನು ತರಲು ಕಾರಣವೇನು ಎಂದು ನೋಡುವುದಾದರೆ,
ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಮಿತಿ ಮೀರುತ್ತಿದ್ದು, ಹೀಗಾಗಿ ಕೇಂದ್ರ ಸರಕಾರ ಈ ಕಠಿಣ ನಿಯಮವನ್ನು ಜಾರಿಗೆ ತಂದಿದೆ.
ದೂರಸಂಪರ್ಕ ಇಲಾಖೆಯ ಎಐ ಮತ್ತು ಡಿಜಿಟಲ್ ಇಂಟೆಲಿಜೆನ್ಸ್ ಯುನಿಟ್ ನೀಡಿರುವ ವರದಿ ಪ್ರಕಾರ, ಸೈಬರ್ ವಂಚಕರು ಸಿಮ್ ಕಾರ್ಡ್ ಇಲ್ಲದ ಸಾಧನಗಳನ್ನು ಬಳಸಿಕೊಂಡು ಅನಾಮಧೇಯವಾಗಿ ವಾಟ್ಸಾಪ್ ಖಾತೆಗಳನ್ನು ಆಪರೇಟ್ ಮಾಡುತ್ತಿದ್ದಾರೆ. ಬೇರೊಬ್ಬರ ಒಟಿಪಿಯನ್ನು ಕದ್ದು, ವಿದೇಶದಲ್ಲಿ ಕುಳಿತುಕೊಂಡು ಭಾರತೀಯ ನಂಬರ್‌ಗಳ ಮೂಲಕ ವಂಚನೆ, ಫಿಶಿಂಗ್, ಡಿಜಿಟಲ್ ಅರೆಸ್ಟ್‌ನಂತಹ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರತಿಯೊಂದು ಮೆಸೇಜಿಂಗ್ ಆ್ಯಪ್ ಖಾತೆಯನ್ನು ಕೆವೈಸಿ ಮಾಡಲಾದ ಭೌತಿಕ ಸಿಮ್ ಕಾರ್ಡ್‌ಗೆ ಕಟ್ಟುನಿಟ್ಟಾಗಿ ಲಿಂಕ್ ಮಾಡುವ ಮೂಲಕ, ಅಪರಾಧಿಗಳನ್ನು ಸುಲಭವಾಗಿ ಪತ್ತೆಹಚ್ಚುವ ಗುರಿಯನ್ನು ಸರ್ಕಾರ ಹೊಂದಿದೆ. ರಾಷ್ಟ್ರೀಯ ಭದ್ರತೆ ಮತ್ತು ವಂಚನೆ ತಡೆಗಟ್ಟಲು ಸಿಮ್ ಬೈಂಡಿಂಗ್ ಅತ್ಯಗತ್ಯ. ಇದರಲ್ಲಿ ಯಾವುದೇ ರಾಜೀ ಇಲ್ಲ, ಗಡುವನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟಪಡಿಸಿದ್ದಾರೆ.



