August 7, 2026
Friday, August 7, 2026
spot_img

ಕೊಡಗು | ಹಾಡಹಗಲೇ ಕಾಫಿ ತೋಟದಲ್ಲಿ ರೈತ ಮಹಿಳೆ ಮೇಲೆ ಚಿರತೆ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಬಳಿ ರೈತ ಮಹಿಳೆ ಮೇಲೆ ಚಿರತೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಲೀಲಾ ಎನ್ನುವವರ ಮೇಲೆ ಚಿರತೆ ದಾಳಿ ಮಾಡಿದೆ. ಮಹಿಳೆಯ ಕಿವಿ, ದವಡೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಮಹಿಳೆಯು ಚಿರತೆಯನ್ನು ನೋಡಿದ ತಕ್ಷಣ ಜೋರಾಗಿ ಕಿರುಚಿದ್ದು, ಇತರ ಕಾರ್ಮಿಕರು ಸಹಾಯಕ್ಕೆ ಧಾವಿಸಿದ್ದಾರೆ.

ಮಹಿಳೆಯನ್ನು ರಕ್ಷಣೆ ಮಾಡಿದ್ದು, ಗಾಯಾಳುವನ್ನು ಗೋಣಿಕೊಪ್ಪ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದೆ. ಚಿಕಿತ್ಸೆಯಲ್ಲಿರುವ ಲೀಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಗ್ರಾಮಸ್ಥರಲ್ಲಿ ಭೀತಿ, ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಉಪವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.

ಡ್ರೋನ್‌ ಕ್ಯಾಮರಾ ಇದ್ದರೂ ತಪ್ಪದ ಸಂಕಷ್ಟ

ಈ ಭಾಗದಲ್ಲಿ ಚಿರತೆ ದಾಳಿ ಮಾಡಿರುವುದು ಇದೇನು ಮೊದಲಲ್ಲ. ಜನ ನಿತ್ಯವೂ ತಮ್ಮ ಕೆಲಸ ಕಾರ್ಯಕ್ಕೆ ತೆರಳುವ ಮುನ್ನ ವಾಪಾಸು ಬರುತ್ತೇವೋ ಇಲ್ಲವೋ ಎನ್ನುವ ಭಯದಿಂದಲೇ ಮನೆಯಿಂದ ಹೊರಗೆ ಹೆಜ್ಜೆ ಇಡುತ್ತಾರೆ. ಕಾಡಾನೆ, ಹುಲಿ, ಚಿರತೆ ಹಾವಳಿಯಿಂದ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ. ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಶಶಿ ನೇತೃತ್ವದಲ್ಲಿ ಸಿಬ್ಬಂದಿ ಕಾಫಿ ತೋಟದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಚಿರತೆಯ ಚಲನವಲನ ಪತ್ತೆಗೆ ಕಾಫಿ ತೋಟದಲ್ಲಿ ಬೋನ್‌ ಮತ್ತು ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.

ಚಿರತೆಗೂ ಗಾಯವಾಗಿದ್ಯಾ?

ದಾಳಿ ಮಾಡಿ ಹೋಗಿರುವ ಚಿರತೆಗೂ ಗಾಯವಾಗಿರುವ ಸಾಧ್ಯತೆ ಇದೆ. ಈ ಚಿರತೆಯನ್ನು ನೋಡಿದ್ದೇವೆ ಎಂದು ಕೆಲ ಗ್ರಾಮಸ್ಥರು ಕೂಡ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಜ್ಜಾಗಿದೆ. ಸಾಕಾನೆಗಳ ನೆರವಿನಿಂದ ಇಂದು ವಿಶೇಷ ಕಾರ್ಯಾಚರಣೆ ನಡೆಯಲಿದೆ. ಚಿರತೆಯನ್ನು ಹಿಡಿಯಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !