ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿಕ್ಷಣ ಸಂಸ್ಥೆಯೊಂದರ ಮಾಲೀಕನೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘೋರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಖಾಸಗಿ ವಸತಿ ಶಾಲೆಯ ಮಾಲೀಕ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷನೂ ಆಗಿರುವ ಧನಂಜಯ್ (A1) ಮತ್ತು ಆತನ ಪತ್ನಿ ಶೈಲಜಾ (A2) ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ವಸತಿ ಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಧನಂಜಯ್ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಮದ್ಯದ ಅಮಲಿನಲ್ಲಿ ತಡರಾತ್ರಿ ಬಾಲಕಿಯರ ಕೊಠಡಿಗೆ ನುಗ್ಗುತ್ತಿದ್ದ ಈತ, ಅಜ್ಜನ ವಯಸ್ಸಾಗಿದ್ದರೂ ವಿಕೃತವಾಗಿ ವರ್ತಿಸುತ್ತಿದ್ದ. ಮಕ್ಕಳನ್ನು ವಾರ್ಡನ್ ಕೊಠಡಿಗೆ ಕರೆಸಿಕೊಂಡು ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.
ತಮಗಾಗುತ್ತಿರುವ ಕಿರುಕುಳದ ಬಗ್ಗೆ ನೊಂದ ಬಾಲಕಿಯರು ಮಾಲೀಕನ ಪತ್ನಿ ಶೈಲಜಾ ಬಳಿ ಅಳಲು ತೋಡಿಕೊಂಡಿದ್ದರು. ಆದರೆ, ನ್ಯಾಯ ಕೊಡಿಸಬೇಕಾದ ಆಕೆ, ಪತಿಯ ನೀಚ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸಿದ್ದಾಳೆ. ಈ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಯರಿಗೆ ಬೆದರಿಕೆ ಹಾಕಿದ್ದಲ್ಲದೆ, ಎಂಟು ದಿನಗಳ ಕಾಲ ಅವರನ್ನು ಪೋಷಕರೊಂದಿಗೆ ಮಾತನಾಡಲು ಬಿಡದೆ ಶಾಲೆಯಲ್ಲೇ ಬಂಧಿಯಾಗಿರಿಸಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕೊನೆಗೂ ಪೋಷಕರಿಗೆ ಕರೆ ಮಾಡಲು ಯಶಸ್ವಿಯಾದ ಬಾಲಕಿಯರು ಫೆಬ್ರವರಿ 27 ರಂದು ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೋಷಕರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆಯ ವೇಳೆ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಸಂತ್ರಸ್ತ ಮಕ್ಕಳಿಗೆ ಪಪ್ಪಾಯ ತಿನ್ನಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಗಂಭೀರ ಅಂಶವೂ ಹೊರಬಂದಿದೆ.
ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಇಂತಹ ಘಟನೆ ನಡೆದಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಸದ್ಯ ದಂಪತಿಗಳಿಬ್ಬರೂ ಪೋಲಿಸ್ ವಶದಲ್ಲಿದ್ದಾರೆ.



