September 27, 2026
Sunday, September 27, 2026
spot_img

ವಿಶ್ವಸಂಸ್ಥೆಯಲ್ಲಿ ಭಾರತದ ಪರ ರಷ್ಯಾ ಸಖತ್ ಬ್ಯಾಟಿಂಗ್: ಶಾಶ್ವತ ಸದಸ್ಯತ್ವಕ್ಕೆ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:


ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕೆಂಬ ಬೇಡಿಕೆಗೆ ರಷ್ಯಾ ಮತ್ತೊಮ್ಮೆ ಬೆಂಬಲ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆಯ ಭಾಗವಾಗಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕು ಎಂದು ರಷ್ಯಾ ಹೇಳಿದ್ದು, ಭಾರತ ಮತ್ತು ಬ್ರೆಜಿಲ್‌ನ ಶಾಶ್ವತ ಸದಸ್ಯತ್ವದ ಉಮೇದುವಾರಿಕೆಯನ್ನು ತಾನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ಭದ್ರತಾ ಮಂಡಳಿಯ ಸುಧಾರಣೆಯಲ್ಲಿ ಅಭಿವೃದ್ಧಿಶೀಲ ಪ್ರದೇಶಗಳಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯಬೇಕಿದೆ ಎಂದು ಒತ್ತಿ ಹೇಳಿದರು. ಇದೇ ವೇಳೆ ಭಾರತ ಮತ್ತು ಬ್ರೆಜಿಲ್‌ಗಳನ್ನು ಶಾಶ್ವತ ಸದಸ್ಯರನ್ನಾಗಿ ಮಾಡುವ ಉಮೇದುವಾರಿಕೆಗೆ ರಷ್ಯಾ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.

ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ, ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ಐದು ಶಾಶ್ವತ ಸದಸ್ಯ ರಾಷ್ಟ್ರಗಳಿವೆ. ಈ ಐದು ರಾಷ್ಟ್ರಗಳಿಗೆ ವೀಟೊ ಅಧಿಕಾರವೂ ಇದೆ. ಭದ್ರತಾ ಮಂಡಳಿಯನ್ನು ಇಂದಿನ ಜಾಗತಿಕ ವಾಸ್ತವತೆಗೆ ಅನುಗುಣವಾಗಿ ಸುಧಾರಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ.

ಇದೇ ವೇಳೆ ಜರ್ಮನಿ ಮತ್ತು ಜಪಾನ್‌ನಂತಹ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೆಚ್ಚುವರಿ ಶಾಶ್ವತ ಸ್ಥಾನ ನೀಡುವುದಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸಿದೆ. ಭದ್ರತಾ ಮಂಡಳಿ ಸುಧಾರಣೆಯಲ್ಲಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಪ್ರಾತಿನಿಧ್ಯ ವಿಸ್ತರಣೆಗೆ ಆದ್ಯತೆ ನೀಡಬೇಕು ಎಂಬುದು ರಷ್ಯಾದ ನಿಲುವಾಗಿದೆ.

ಶಾಶ್ವತ ಸದಸ್ಯತ್ವ ಸಿಗುವುದು ಹೇಗೆ?

ಭಾರತಕ್ಕೆ ರಷ್ಯಾ ಬೆಂಬಲ ವ್ಯಕ್ತಪಡಿಸಿರುವುದು ರಾಜತಾಂತ್ರಿಕವಾಗಿ ಮಹತ್ವದ ಬೆಳವಣಿಗೆಯಾದರೂ, ಇದರಿಂದ ಭಾರತಕ್ಕೆ ತಕ್ಷಣವೇ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ದೊರೆತಿಲ್ಲ. ಭದ್ರತಾ ಮಂಡಳಿಯ ರಚನೆಯಲ್ಲಿ ಬದಲಾವಣೆ ತರಲು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಅನುಮೋದನೆ ಅಗತ್ಯವಿದೆ. ಪ್ರಸ್ತುತ ಐದು ಶಾಶ್ವತ ಸದಸ್ಯ ರಾಷ್ಟ್ರಗಳಾದ ಅಮೆರಿಕ, ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್‌ಗಳ ಪಾತ್ರವೂ ಈ ಪ್ರಕ್ರಿಯೆಯಲ್ಲಿ ಮಹತ್ವದ್ದಾಗಿದೆ. ಭಾರತದ ಶಾಶ್ವತ ಸದಸ್ಯತ್ವದ ಬೇಡಿಕೆಗೆ ಈಗಾಗಲೇ ವಿವಿಧ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸುತ್ತಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಇನ್ನಷ್ಟು ಪ್ರತಿನಿಧಾತ್ಮಕವಾಗಿಸುವ ಕುರಿತು ಚರ್ಚೆ ಮುಂದುವರಿದಿದೆ. ರಷ್ಯಾದ ಇತ್ತೀಚಿನ ಸ್ಪಷ್ಟ ಬೆಂಬಲವೂ ಈ ಚರ್ಚೆಗೆ ಮತ್ತಷ್ಟು ಮಹತ್ವ ನೀಡಿದೆ.

Must Read