February 28, 2026
Saturday, February 28, 2026
spot_img

ಸಕಾಲಕ್ಕೆ ಸಿಗದ ಮಾಹಿತಿಗೆ ಆಯೋಗದ ಚಾಟಿ: ನಾಲ್ವರು ಅಧಿಕಾರಿಗಳ ಜೇಬಿಗೆ ಕತ್ತರಿ!

ಹೊಸದಿಗಂತ ಕಲಬುರಗಿ:

ಮಾಹಿತಿ ಹಕ್ಕು ಕಾಯ್ದೆಯಡಿ ಸಕಾಲಕ್ಕೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠವು ಭಾರಿ ದಂಡ ವಿಧಿಸಿದೆ. ರಾಜ್ಯ ಮಾಹಿತಿ ಆಯುಕ್ತರಾದ ಬಿ. ವೆಂಕಟ ಸಿಂಗ್ ಅವರು ಒಬ್ಬ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹಾಗೂ ಮೂವರು ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ತಲಾ 10,000 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.

ಆಯೋಗದ ನಿರ್ದೇಶನಗಳನ್ನು ಪಾಲಿಸದ ಈ ಕೆಳಗಿನ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಲಾಗಿದೆ:

ಶಿವಕುಮಾರ್ ದೊಡ್ಡಮನಿ: ಪಿಡಿಒ, ತಾಡರು ಗ್ರಾ.ಪಂ (ಹರಪನಹಳ್ಳಿ ತಾಲ್ಲೂಕು).

ಯಂಕನಗೌಡ: ಕಾರ್ಯದರ್ಶಿ, ತಡಬಿಡಿ ಗ್ರಾ.ಪಂ (ವಡಗೇರಾ ತಾಲ್ಲೂಕು).

ಮಲ್ಲಿಕಾರ್ಜುನ ನಾಯಕ್: ಕಾರ್ಯದರ್ಶಿ, ಗುಂಡಗುರ್ತಿ ಗ್ರಾ.ಪಂ.

ಇಸ್ಮಾಯಿಲ್: ಕಾರ್ಯದರ್ಶಿ, ಸೈದಾಪೂರ ಗ್ರಾ.ಪಂ (ಯಾದಗಿರಿ ತಾಲ್ಲೂಕು).

ಸೈದಾಪೂರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಇಸ್ಮಾಯಿಲ್ ಅವರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಅವರಿಗೆ ಒಟ್ಟು 20,000 ರೂ. ದಂಡ ವಿಧಿಸಲಾಗಿದೆ.

ತಡಬಿಡಿ ಗ್ರಾ.ಪಂ ಕಾರ್ಯದರ್ಶಿ ಯಂಕನಗೌಡ ಅವರು ಮಾಹಿತಿ ನೀಡಲು ವಿಳಂಬ ಮಾಡಿದ್ದಕ್ಕಾಗಿ, ಅರ್ಜಿದಾರರಿಗೆ 3,000 ರೂ. ಗಳ ಪರಿಹಾರ ಧನ ನೀಡುವಂತೆ ಸೂಚಿಸಲಾಗಿದೆ.

ಒಟ್ಟು ಐದು ಪ್ರಕರಣಗಳಲ್ಲಿ ಸೇರಿ ಒಟ್ಟು 50,000 ರೂ. ದಂಡ ವಿಧಿಸಲಾಗಿದ್ದು, ಈ ಹಣವನ್ನು ಪಾವತಿಸಿ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಆಯೋಗವು ಕಟ್ಟುನಿಟ್ಟಿನ ಆದೇಶ ನೀಡಿದೆ.

ಮಾಹಿತಿ ಹಕ್ಕು ಕಾಯ್ದೆ 2005ರ ಕಲಂ 18(3) ರಡಿ ಈ ಹಿಂದೆ ನಿರ್ದೇಶನ ನೀಡಿದ್ದರೂ, ಅದನ್ನು ಪಾಲಿಸದ ಕಾರಣ ಕಲಂ 20(1) ರ ಅಡಿಯಲ್ಲಿ ಈ ದಂಡನಾತ್ಮಕ ಕ್ರಮ ಕೈಗೊಳ್ಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !