July 5, 2026
Sunday, July 5, 2026
spot_img

ಮೊಬೈಲ್ ಟಾರ್ಚ್ ಬೆಳಕಲ್ಲಿ 90 ಕಿ.ಮೀ. ಚಲಿಸಿದ ಬಸ್: ವೈರಲ್ ಆಗಿದೆ ಕೆಕೆಆರ್ಟಿಸಿ ‘ಸಾಹಸ’!

ಹೊಸದಿಗಂತ ಕಲಬುರಗಿ:

ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುವ ಘಟನೆಯೊಂದು ಕಲಬುರಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಹೆಡ್‌ಲೈಟ್ ಇಲ್ಲದೆಯೇ ರಾತ್ರಿ ವೇಳೆ ಸುಮಾರು 90 ಕಿಲೋಮೀಟರ್ ಸಂಚರಿಸಿದ್ದು, ಕಂಡಕ್ಟರ್ ಮೊಬೈಲ್ ಫೋನ್‌ನ ಟಾರ್ಚ್ ಆನ್ ಮಾಡಿ ಬೆಳಕು ನೀಡುತ್ತಿದ್ದರೆ, ಚಾಲಕ ಅದನ್ನೇ ನಂಬಿ ಬಸ್ ಚಲಾಯಿಸಿರುವ ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕಲಬುರಗಿಯಿಂದ ಚಿಂಚೋಳಿ ತಾಲೂಕಿನತ್ತ ತೆರಳುತ್ತಿದ್ದ ಕೊನೆಯ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಬಸ್‌ನ ಹೆಡ್‌ಲೈಟ್ ಕೈಕೊಟ್ಟಿದ್ದರೂ, ದುರಸ್ತಿ ಮಾಡದೆ ಸೇವೆಗೆ ಬಿಡಲಾಗಿರುವುದು ಪ್ರಯಾಣಿಕರ ಸುರಕ್ಷತೆ ಬಗ್ಗೆ ಪ್ರಶ್ನೆ‌ ಮೂಡುವಂತೆ ಮಾಡಿದೆ.

ಸುಮಾರು 90 ಕಿ.ಮೀ. ದೂರದ ಕತ್ತಲ ರಸ್ತೆಯಲ್ಲಿ ಪ್ರಯಾಣಿಕರ ಜೀವವನ್ನು ಪಣಕ್ಕಿಟ್ಟು ಬಸ್ ಓಡಿಸಿರುವ ಈ ಘಟನೆ ಮಾತ್ರ ಈಗ ಎಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ 15 ದಿನಗಳಿಂದ ಬಸ್ ನಲ್ಲಿ ಹೆಡ್‌ಲೈಟ್ ಸಮಸ್ಯೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೂಡಾ ಕೇಳಿಬಂದಿದೆ. ಪರಿಸ್ಥಿತಿಯ ಅನಿವಾರ್ಯತೆಯಿಂದ ಚಾಲಕ ಮತ್ತು ಕಂಡಕ್ಟರ್ ಅನಿವಾರ್ಯವಾಗಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಸ್ ಚಲಾಯಿಸಿದ್ದಾರೆ ಎನ್ನಲಾಗಿದೆ.

ಈ ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೂಲಭೂತ ಸೌಕರ್ಯಗಳ ನಿರ್ವಹಣೆಯಲ್ಲಿ ವಿಫಲವಾಗಿರುವ ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡಾ ಕೇಳಿಬಂದಿದೆ. ಒಂದು ವೇಳೆ ಈ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ್ದರೆ ಅದರ ಹೊಣೆ ಯಾರು ಹೊರುತ್ತಿದ್ದರು ಎಂದು ಪ್ರಶ್ನಿಸಿರುವ ಪ್ರಯಾಣಿಕರು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !