ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್‌ನ 50ನೇ ಪಂದ್ಯವು ಪಾಕಿಸ್ತಾನ ತಂಡದ ಪಾಲಿಗೆ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ. ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಲಂಕಾ ವಿರುದ್ಧ ಪಾಕಿಸ್ತಾನ ಸೆಣಸಾಡಲಿದ್ದು, ಸೆಮಿಫೈನಲ್ ಪ್ರವೇಶಿಸಲು ಪಾಕ್‌ಗೆ ಕೇವಲ ಗೆಲುವಷ್ಟೇ ಸಾಲದು, ಅದು ‘ಅಮೋಘ ಜಯ’ವಾಗಿರಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಪಾಕಿಸ್ತಾನ ತಂಡವು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಡಬೇಕೆಂದರೆ ನೆಟ್ ರನ್ ರೇಟ್ ಸುಧಾರಿಸಿಕೊಳ್ಳುವುದು ಅತೀ ಮುಖ್ಯ. ಅದಕ್ಕಾಗಿ ತಂಡದ ಮುಂದೆ ಎರಡು ಕಠಿಣ ಆಯ್ಕೆಗಳಿವೆ:
ಶ್ರೀಲಂಕಾ ವಿರುದ್ಧ ಕನಿಷ್ಠ 64 ರನ್‌ಗಳ ಬೃಹತ್ ಅಂತರದ ಜಯ ದಾಖಲಿಸಬೇಕು.
ಶ್ರೀಲಂಕಾ ನೀಡಿದ ಮೊತ್ತವನ್ನು ಕೇವಲ 13 ಓವರ್‌ಗಳಲ್ಲಿ (ಅಂದರೆ 40 ಎಸೆತಗಳು ಬಾಕಿ ಇರುವಂತೆಯೇ) ಚೇಸ್ ಮಾಡಬೇಕು.
ಒಂದು ವೇಳೆ ಶ್ರೀಲಂಕಾ ಮೊದಲು ಬ್ಯಾಟ್ ಮಾಡಿ 201 ರನ್‌ಗಳ ಬೆಟ್ಟದಂತಹ ಗುರಿ ನೀಡಿದರೆ, ಪಾಕಿಸ್ತಾನ ಅದನ್ನು ಕೇವಲ 13.5 ಓವರ್‌ಗಳಲ್ಲಿ ತಲುಪಬೇಕಾಗುತ್ತದೆ. ಅದೇ ರೀತಿ ಲಂಕಾ 151 ರನ್‌ಗಳಿಗೆ ನಿಯಂತ್ರಿಸಲ್ಪಟ್ಟರೆ, ಪಾಕ್ ಪಡೆ 12.4 ಓವರ್‌ಗಳಲ್ಲೇ ಪಂದ್ಯವನ್ನು ಮುಗಿಸಬೇಕಾದ ಒತ್ತಡದಲ್ಲಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪ್ರದರ್ಶನವನ್ನು ಗಮನಿಸಿದರೆ ಈ ಗುರಿ ತಲುಪುವುದು ಅತಿ ಕಷ್ಟದ ಕೆಲಸ ಎಂದೇ ವಿಶ್ಲೇಷಿಸಲಾಗುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ ಪಾಕ್ ಬ್ಯಾಟರ್‌ಗಳು ಒಮ್ಮೆಯೂ 10ರ ಸರಾಸರಿಯಲ್ಲಿ (Run Rate) ರನ್ ಗಳಿಸಿಲ್ಲ. ಹೀಗಿರುವಾಗ, ಲಂಕಾ ಬೌಲರ್‌ಗಳ ವಿರುದ್ಧ ಇಂತಹ ಬಿರುಸಿನ ಬ್ಯಾಟಿಂಗ್ ನಡೆಸಿ ಸೆಮಿಫೈನಲ್‌ಗೇರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.



