September 23, 2026
Wednesday, September 23, 2026
spot_img

ಗುಜರಾತ್ ಟೈಟಾನ್ಸ್ ಪ್ರೀತಿಗಾಗಿ ಸಿಎಸ್‌ಕೆ ಆಫರ್ ತಿರಸ್ಕರಿಸಿದ ನೆಹ್ರಾ: ರವಿಚಂದ್ರನ್ ಅಶ್ವಿನ್ ಸ್ಫೋಟಕ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಹಾಗೂ ಅಭಿಮಾನಿಗಳ ನೆಚ್ಚಿನ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 5 ಬಾರಿ ಟ್ರೋಫಿ ಗೆದ್ದು ದಾಖಲೆ ಬರೆದಿದೆ. ಆದರೆ, ಕಳೆದ ಕೆಲವು ಆವೃತ್ತಿಗಳಲ್ಲಿ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಈ ಸತತ ಕಳಪೆ ಪ್ರದರ್ಶನದಿಂದ ಎಚ್ಚೆತ್ತುಕೊಂಡಿರುವ ಸಿಎಸ್‌ಕೆ ಮ್ಯಾನೇಜ್‌ಮೆಂಟ್, ಈಗ ತಂಡದಲ್ಲಿ ಭಾರಿ ಬದಲಾವಣೆಗೆ ಕೈಹಾಕಿದೆ.

ಐಪಿಎಲ್ ಆರಂಭದಿಂದಲೂ ಸಿಎಸ್‌ಕೆ ತಂಡದ ಬೆನ್ನೆಲುಬಾಗಿ, ಯಶಸ್ವಿ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಸ್ಟೀಫನ್ ಫ್ಲೇಮಿಂಗ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ. ಅವರ ಜಾಗಕ್ಕೆ ಭಾರತದ ಮಾಜಿ ಬೌಲರ್ ಜಹೀರ್ ಖಾನ್ ಅವರನ್ನು ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಆದರೆ, ಈ ನೇಮಕಾತಿಯ ಹಿಂದೆ ಒಂದು ರೋಚಕ ಕಥೆಯಿದೆ.

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಈ ಪ್ರಮುಖ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಜಹೀರ್ ಖಾನ್ ಅವರನ್ನ ಕೋಚ್ ಆಗಿ ಆಯ್ಕೆ ಮಾಡುವ ಮೊದಲು, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮತ್ತೊಬ್ಬ ಮಾಜಿ ವೇಗಿ ಆಶಿಶ್ ನೆಹ್ರಾ ಅವರನ್ನು ಸಂಪರ್ಕಿಸಿತ್ತು. ನೆಹ್ರಾ ಮಾತ್ರವಲ್ಲದೆ, ಭಾರತೀಯ ಕ್ರಿಕೆಟ್‌ನ ಇನ್ನೂ ಇಬ್ಬರು ದಂತಕಥೆಗಳು ಸಹ ಈ ಕೋಚಿಂಗ್ ರೇಸ್‌ನಲ್ಲಿದ್ದರು ಎಂದು ಅಶ್ವಿನ್ ಹೇಳಿದ್ದಾರೆ.

2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಮೊದಲ ಸೀಸನ್‌ನಲ್ಲೇ ಚಾಂಪಿಯನ್ ಪಟ್ಟ ತಂದುಕೊಟ್ಟ ಕೀರ್ತಿ ಆಶಿಶ್ ನೆಹ್ರಾಗೆ ಸಲ್ಲುತ್ತದೆ. ಆ ಬಳಿಕ 2023ರ ಸೀಸನ್‌ನಲ್ಲೂ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದ ನೆಹ್ರಾ, 2026ರ ಐಪಿಎಲ್ ಸೀಸನ್‌ನಲ್ಲೂ ಗುಜರಾತ್ ತಂಡ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇಶದ ಅತ್ಯಂತ ಸಕ್ರಿಯ ಹಾಗೂ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರೆನಿಸಿಕೊಂಡಿರುವ ನೆಹ್ರಾ, ಪ್ರಸ್ತುತ ಗುಜರಾತ್ ಫ್ರಾಂಚೈಸಿಯೊಂದಿಗೆ ಅತ್ಯಂತ ಸಂತೋಷವಾಗಿದ್ದಾರೆ. ಹೀಗಾಗಿ, ಪ್ರಸ್ತುತ ಹಂತದಲ್ಲಿ ತಮ್ಮ ಹಾದಿಯನ್ನು ಬದಲಾಯಿಸಲು ಇಷ್ಟಪಡದ ನೆಹ್ರಾ, ಸಿಎಸ್‌ಕೆ ನೀಡಿದ ಬೃಹತ್ ಆಫರ್ ಅನ್ನು ಸ್ವಇಚ್ಛೆಯಿಂದ ತಿರಸ್ಕರಿಸಿದರು ಎಂದು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.

ನೆಹ್ರಾ ಅವರ ಉತ್ತರ ಹಾಗೂ ಇತರ ದಿಗ್ಗಜರ ಜೊತೆಗಿನ ಮಾತುಕತೆಯ ನಂತರ, ಸಿಎಸ್‌ಕೆ ಆಡಳಿತ ಮಂಡಳಿಯು ವೇಗಿ ಜಹೀರ್ ಖಾನ್ ಅವರಿಗೆ ತಂಡದ ಸಾರಥ್ಯವನ್ನು ಒಪ್ಪಿಸಿದೆ. ಜಹೀರ್ ಅವರ ಅಪಾರ ಅನುಭವ ಮತ್ತು ತಂತ್ರಗಾರಿಕೆ ಮುಂಬರುವ ಆವೃತ್ತಿಗಳಲ್ಲಿ ಸಿಎಸ್‌ಕೆ ತಂಡವನ್ನು ಮತ್ತೆ ಚಾಂಪಿಯನ್ ಪಟ್ಟದತ್ತ ಕೊಂಡೊಯ್ಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !