February 28, 2026
Saturday, February 28, 2026
spot_img

ಫೀಸ್ ಕಟ್ಟಿಲ್ಲ ಎಂದು ಹಾಲ್ ಟಿಕೆಟ್ ನೀಡದ ಕಾಲೇಜು: ಬೈಕ್‌, ಮೊಬೈಲ್ ಅಡವಿಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿನಿ!

ಹೊಸದಿಗಂತ ವರದಿ, ಹಾವೇರಿ :

ಪಾಲಕರು ಕಾಲೇಜು ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಹಾಲ್ ಟಿಕೆಟ್ ನೀಡದೇ, ಅವಳ ಪಾಲಕರ ಬೈಕ್ ಮತ್ತು ಮೊಬೈಲ್ ಗಳನ್ನು ಕಸಿದು ಇಟ್ಟುಕೊಂಡ ಘಟನೆ ಜಿಲ್ಲೆಯ ರಾಣೆಬೆನ್ನೂರ ನಗರದ ಬಿಎಜೆಎಸ್‌ಎಸ್ ಕಾಲೇಜು ಆವರಣದ ಡಿಬಿಎಸ್ ಮೆಡಿಕಲ್ ನೀಟ್ ಅಕಾಡೆಮಿ ಕಾಲೇಜಿನಲ್ಲಿ ಶನಿವಾರ ನಡೆದಿದೆ.

ಹಾಲ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಸಾರಾ ಜೆಸ್ಸಿಕಾ ಕಣ್ಣೀರಿಟ್ಟಿದ್ದಾಳೆ. ನಂತರ ಮಧ್ಯವರ್ತಿಗಳು ಕಾಲೇಜಿಗೆ ಬಂದು ಶಾಲಾ ಶುಲ್ಕ ಪಾವತಿಸುತ್ತಾರೆ ಹಾಲ್ ಟಿಕೆಟ್ ಕೊಡಿ ಎಂದಾಗ ಮಧ್ಯವರ್ತಿಯ ಬೈಕ್‌ನ್ನೇ ಅಡವಿಟ್ಟುಕೊಂಡು ಕಾಲೇಜು ವಿದ್ಯಾರ್ಥಿನಿಗೆ ಹಾಲ್ ಟಿಕೆಟ್ ನೀಡಿದ ಅಮಾನವೀಯ ಘಟನೆ ನಡೆದಿದೆ.

ರಾಣೆಬೆನ್ನೂರ ನಗರದ ಬಿಎಜೆಎಸ್‌ಎಸ್ ಕಾಲೇಜು ಆವರಣದ ಡಿಬಿಎಸ್ ಮೆಡಿಕಲ್ ನೀಟ್ ಅಕಾಡೆಮಿ ಕಾಲೇಜಿನಲ್ಲಿ ಸಾರಾ ಜೆಸ್ಸಿಕಾ ಪಿಯುಸಿ ವಿಜ್ಞಾನ ಭಾಗದಲ್ಲಿ ಓದುತ್ತಿದ್ದು, ಪರೀಕ್ಷೆ ಹಾಲ್ ಟಿಕೆಟ್ ನೀಡಲು ಕಳೆದ ಒಂದು ವಾರದಿಂದ ಆಡಳಿತ ಮಂಡಳಿ ಸತಾಯಿಸುತ್ತಿದ್ದಾರೆ. ಮೊದಲ ಪರೀಕ್ಷೆ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ವಿಧ್ಯಾರ್ಥಿನಿ ಕಾಲೇಜಿಗೆ ಬಂದು, ವಿದ್ಯಾರ್ಥಿನಿಯ ಭವಿಷ್ಯ ಹಾಳಾಗಬಾರದು ಹಾಲ್ ಟಿಕೆಟ್ ಕೊಡಿ ಎಂದು ವಿದ್ಯಾರ್ಥಿನಿಯ ತಂದೆ ರಾಜು ಬೇಡಿಕೊಂಡಾಗ ದಾಗ ‘ಯಾರಾದ್ರೂ ಪುಕ್ಸಟ್ಟೆ ಕಲಿಸ್ತಾರಾ’ ಎಂದು ದರ್ಪ ತೋರಿದ್ದಾರೆ. ಕೊನೆಗೆ ಮಧ್ಯಸ್ಥಿಕೆ ವಹಿಸಲು ಬಂದಿದ್ದ ಶಿವಪುತ್ರಪ್ಪ ಎಂಬುವರ ಬೈಕ್ ಮತ್ತು ಮೋಬೈಲ್ ಅಡವಿಟ್ಟುಕೊಂಡು ಹಾಲ್‌ಟಿಕೆಟ್ ನೀಡಿದ್ದಾರೆ. ನಂತರ ಮಾತುಕತೆ ನಡೆಸಿ ಮೋಬೈಲ್ ವಾಪಸ್ ಪಡೆದಿದ್ದು, ಇದೀಗ ಶಿವಪುತ್ರಪ್ಪ ಬೈಕ್ ಕಾಲೇಜಿನ ಆಡಳಿತ ಮಂಡಳಿ ಕೈಯಲ್ಲಿದೆ.

ಬಿಎಜೆಎಸ್‌ಎಸ್ ಕಾಲೇಜು ಆವರಣದ ಡಿಬಿಎಸ್ ಮೆಡಿಕಲ್ ನೀಟ್ ಅಕಾಡೆಮಿ ಕಾಲೇಜನ್ನು ಸುನಿತಾ ಎಂಬುವವರು ನಡೆಸುತ್ತಿದ್ದು ಆಡಳಿತಾಧಿಕಾರಿ ಅಥವಾ ಉಸ್ತುವಾರಿಯಾಗಿದ್ದಾರೆ. ಈ ಸುನಿತಾ ಮೂಲತಃ ಓರ್ವ ಸರ್ಕಾರಿ ಶಿಕ್ಷಕಿ. ಸರ್ಕಾರಿ ಹಿರಿಯ ಉನ್ನತೀಕರಿಸಿದ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ ಇವರು ಖಾಸಗಿ ಕಾಲೇಜಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ೩೦ಸಾವಿರ ಶುಲ್ಕಕ್ಕಾಗಿ ವಿದ್ಯಾರ್ಥಿನಿ ಕಣ್ಣೀರು ಹಾಕಿಸಿದ್ದಾರೆ. ಅಲ್ಲದೆ ಹಿಂದೆ ಈ ಕಾಲೇಜಿನಲ್ಲಿ ಕೆಲಸ ಮಾಡಿದ ಬೋಧಕ ಸಿಬ್ಬಂದಿಗೂ ವೇತನ ನೀಡಿಲ್ಲ ಎಂಬ ದೂರು ಕೇಳಿ ಬಂದಿದ್ದು, ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಸುನೀತಾ ನಿರಾಕರಿಸಿದ್ದಾರೆ.

ಇದೀಗ ಸ್ನೇಹಿತರ ಬಳಿ ಕೈಗಡ ಪಡೆದು ಕಾಲೇಜುಶುಲ್ಕವನ್ನ ಕಟ್ಟಿದ್ದೇನೆ. ಆದರೆ ಅದಕ್ಕೆ ಸರಿಯಾದ ರಸೀದಿ ನೀಡಲ್ಲ, ಇವರನ್ನು ಹೇಗೆ ನಂಬೋದು, ಈ ಬಗ್ಗೆ ಬಿಇಒ ಶ್ಯಾಮಸುಂದರ್ ಗಮನಕ್ಕೆ ತಂದಿದ್ದು ನೋಟಿಸ್ ನೀಡಿ ತನಿಖೆ ಮಾಡುತ್ತೇವೆ ಅಂದಿದ್ದಾರೆ. ಹೀಗಾದರೆ ಬಡವರ ಸ್ಥಿತಿ ಏನು? ಎಂದು ವಿದ್ಯಾರ್ಥಿನಿ ಸಾರಾ ಜೆಸ್ಸಿಕಾ ತಂದೆ ರಾಜು ಕಣ್ಣೀರಿಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !