ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಕ್ಷಿಣೆ ಕಿರುಕುಳದಿಂದ ಖಾಸಗಿ ಕಂಪೆನಿ ಉದ್ಯೋಗಿ ಶಿಲ್ಪಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಇನ್ಫೋಸಿಸ್ ಉದ್ಯೋಗಿಯಾಗಿರುವ ಮಹಿಳಾ ಟೆಕ್ಕಿ ಶಿಲ್ಪಾ ಕಳೆದ ಮೂರು ವರ್ಷಗಳ ಹಿಂದೆ ಪ್ರವೀಣ್ (38) ಎನ್ನುವವರನ್ನು ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮದುವೆಯ ಸಮಯದಲ್ಲಿ ಶಿಲ್ಪಾ ಕುಟುಂಬಸ್ಥರು 50 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದರು.
ಆದ್ರೆ ಮದುವೆಯಾದಾಗಿನಿಂದಲೂ ಪತಿ ಪ್ರವೀಣ್, ಅತ್ತೆ ಶಾಂತ ಮತ್ತು ನಾದಿನಿ ಪ್ರಿಯಾ ಸಣ್ಣಪುಟ್ಟ ವಿಚಾರಗಳಿಗೂ ಗಲಾಟೆ ಮಾಡಿ ಶಿಲ್ಪಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಕೆಲವು ತಿಂಗಳ ಹಿಂದೆ ಗಲಾಟೆ ತೀವ್ರಗೊಂಡು ಶಿಲ್ಪಾ ತನ್ನ ತವರು ಮನೆಗೆ ಹೋಗಿದ್ದರು. ನಂತರ ಪ್ರವೀಣ್ ಕುಟುಂಬಸ್ಥರು ರಾಜಿ ಪಂಚಾಯ್ತಿ ಮಾಡಿ ಶಿಲ್ಪಾಳನ್ನು ವಾಪಸ್ ಕರೆದುಕೊಂಡು ಹೋಗಿದ್ದರು. ಶಿಲ್ಪಾ ಗರ್ಭಿಣಿಯಾಗಿದ್ದರೂ ಸಹ, ಕುಟುಂಬಸ್ಥರ ಕಿರುಕುಳ ಮುಂದುವರೆದಿತ್ತು ಎಂದು ಮೃತಳ ತಾಯಿ ಶಾರದಾ ಆರೋಪಿಸಿದ್ದಾರೆ.
ಆಗಸ್ಟ್ 26ರ ರಾತ್ರಿ, ಶಿಲ್ಪಾ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿದ ಪ್ರವೀಣ್ ಕುಟುಂಬದವರು, ‘ಹಾರ್ಟ್‌ಅಟ್ಯಾಕ್’ ಆಗಿದೆ ಎಂದು ಹೇಳಿ ವಂಚಿಸಲು ಪ್ರಯತ್ನಿಸಿದ್ದರು. ಆದರೆ, ಶಿಲ್ಪಾ ಕುಟುಂಬದವರು ಸ್ಥಳಕ್ಕೆ ಹೋಗಿ ನೋಡಿದಾಗ ವಿಷಯ ಬಯಲಾಗಿದೆ.
ಶಿಲ್ಪಾ ತಾಯಿ ಶಾರದಾ ಮಾತನಾಡಿ, ‘ನನ್ನ ಮಗಳಿಗೆ ಪ್ರತಿದಿನ ಕಿರುಕುಳ ಕೊಡುತ್ತಿದ್ದರು. ಇತ್ತೀಚೆಗೆ ₹10 ಲಕ್ಷ ಹಣವನ್ನೂ ನೀಡಿದ್ದೆವು. ಆದರೆ ಕಿರುಕುಳ ನಿಲ್ಲಲಿಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಇಂತಹ ಘಟನೆ ಬೇರೆ ಹೆಣ್ಣುಮಕ್ಕಳಿಗೆ ಆಗಬಾರದು’ ಎಂದು ಕಣ್ಣೀರು ಹಾಕಿದ್ದಾರೆ.
ಸುದ್ಧಗುಂಟೆಪಾಳ್ಯ ಪೊಲೀಸರು ಶಿಲ್ಪಾ ಪತಿ ಪ್ರವೀಣ್ ಅವರನ್ನು ಬಂಧಿಸಿದ್ದು, ಅತ್ತೆ ಶಾಂತ ಮತ್ತು ನಾದಿನಿ ಪ್ರಿಯಾ ವಿರುದ್ಧವೂ ದೂರು ದಾಖಲಾಗಿದೆ. ಈ ಬಗ್ಗೆ ಪೊಲೀಸರು ಕೂಡ ಎಲ್ಲ ಆಯಾಮಗಳಲ್ಲಿಯೂ ವಿಚಾರಣೆ ನಡೆಸುತ್ತಿದ್ದಾರೆ.