March 1, 2026
Sunday, March 1, 2026
spot_img

ರಾಯಚೂರಿನಲ್ಲಿ ಭೀಕರ ಅಪಘಾತ: ಆಟೋದಿಂದ ಬಿದ್ದು ಬಿಎಸ್‌ಸಿ ವಿದ್ಯಾರ್ಥಿ ದಾರುಣ ಅಂತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್

ನಗರದ ಸ್ಟೇಷನ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬನ ಬದುಕನ್ನು ಕಸಿದುಕೊಂಡಿದೆ. ಆಟೋದಿಂದ ಕೆಳಕ್ಕೆ ಬಿದ್ದ ವಿದ್ಯಾರ್ಥಿಯ ಮೇಲೆ ಬಸ್ ಹರಿದ ಪರಿಣಾಮ, ಬಸವರಾಜ್ (21) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.

ಮೃತ ಬಸವರಾಜ್ ತನ್ನ ಸ್ನೇಹಿತರೊಂದಿಗೆ ಆಶಾಪುರ ರಸ್ತೆಯಿಂದ ಬಸವೇಶ್ವರ ವೃತ್ತದ ಕಡೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದನು. ಈ ವೇಳೆ ಮುಖ್ಯರಸ್ತೆಯಲ್ಲಿ ನಿಂತಿದ್ದ ಮತ್ತೊಂದು ಆಟೋವನ್ನು ತಪ್ಪಿಸಲು ಚಾಲಕ ಅತಿವೇಗವಾಗಿ ಆಟೋವನ್ನು ತಿರುಗಿಸಿದ್ದಾನೆ (ಕಟ್ ಹೊಡೆದಿದ್ದಾನೆ). ಈ ಹಠಾತ್ ತಿರುವಿನಿಂದಾಗಿ ನಿಯಂತ್ರಣ ತಪ್ಪಿದ ಬಸವರಾಜ್ ಆಟೋದಿಂದ ಹೊರಕ್ಕೆ ಬಿದ್ದಿದ್ದಾನೆ. ದುರದೃಷ್ಟವಶಾತ್, ಅದೇ ಕ್ಷಣದಲ್ಲಿ ಹಿಂಬದಿಯಿಂದ ಬರುತ್ತಿದ್ದ ಸಾರಿಗೆ ಬಸ್ ಆತನ ಮೇಲೆ ಹರಿದಿದ್ದು, ತೀವ್ರ ಗಾಯಗೊಂಡ ಬಸವರಾಜ್ ಕ್ಷಣಾರ್ಧದಲ್ಲಿ ಪ್ರಾಣ ಬಿಟ್ಟಿದ್ದಾನೆ.

ಬಸವರಾಜ್ ಕಡುಬಡತನದ ಕುಟುಂಬದಿಂದ ಬಂದವನಾಗಿದ್ದು, ಎಸ್‌ಟಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದನು. ಮನೆಯ ಆರ್ಥಿಕ ಪರಿಸ್ಥಿತಿಗೆ ನೆರವಾಗಲು ಬಿಡುವಿನ ಸಮಯದಲ್ಲಿ ಕೇಟರಿಂಗ್ ಕೆಲಸಕ್ಕೆ ಹೋಗಿ ದಿನಗೂಲಿ ಮಾಡುತ್ತಿದ್ದನು. ಘಟನೆ ನಡೆದ ದಿನವೂ ಸಹ ಆತ ಕೆಲಸಕ್ಕೆಂದು ಹೊರಟಿದ್ದ ಎನ್ನಲಾಗಿದೆ.

ಅಪಘಾತದ ಈ ಭೀಕರ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಕರುಳು ಹಿಂಡುವಂತಿದೆ. ಸದ್ಯ ರಾಯಚೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೃತನ ಕುಟುಂಬಸ್ಥರು ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !