ಹೋಳಿ ಎಂದರೆ ಕೇವಲ ಬಣ್ಣಗಳಾಟವಲ್ಲ, ಅದು ಅಧರ್ಮದ ವಿರುದ್ಧ ಧರ್ಮ ಜಯಿಸಿದ ಸಂಕೇತ. ವಸಂತ ಕಾಲದ ಆಗಮನವನ್ನು ಸಾರುವ ಈ ಹಬ್ಬದ ಹಿಂದೆ ರೋಚಕವಾದ ಪೌರಾಣಿಕ ಹಿನ್ನೆಲೆಯಿದೆ.
ಹೋಳಿ ಹಬ್ಬದ ಪ್ರಮುಖ ಹಿನ್ನೆಲೆ ಇರುವುದು ಭಕ್ತ ಪ್ರಹ್ಲಾದನ ಕಥೆಯಲ್ಲಿ. ತಾನೇ ದೇವರು ಎಂದು ಬೀಗುತ್ತಿದ್ದ ಅಸುರ ರಾಜ ಹಿರಣ್ಯಕಶಿಪು, ವಿಷ್ಣು ಭಕ್ತನಾಗಿದ್ದ ತನ್ನ ಮಗ ಪ್ರಹ್ಲಾದನನ್ನು ಕೊಲ್ಲಲು ಸಂಚು ರೂಪಿಸುತ್ತಾನೆ. ಬೆಂಕಿಯಲ್ಲಿ ಸುಡದ ವರ ಪಡೆದಿದ್ದ ತನ್ನ ತಂಗಿ ಹೋಲಿಕೆಯ ಮಡಲಲ್ಲಿ ಪ್ರಹ್ಲಾದನನ್ನು ಕೂರಿಸಿ ಬೆಂಕಿ ಹಚ್ಚುತ್ತಾನೆ. ಆದರೆ, ವಿಷ್ಣುವಿನ ಕೃಪೆಯಿಂದ ಭಕ್ತ ಪ್ರಹ್ಲಾದ ಪಾರಾಗುತ್ತಾನೆ, ದುಷ್ಟ ಹೋಲಿಕೆ ಸುಟ್ಟು ಭಸ್ಮವಾಗುತ್ತಾಳೆ. ಈ ಘಟನೆಯ ನೆನಪಿಗಾಗಿ ‘ಹೋಲಿಕಾ ದಹನ’ ಮಾಡಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಇದನ್ನು ‘ಕಾಮದಹನ’ ಎಂದೂ ಕರೆಯುತ್ತಾರೆ. ಶಿವನ ತಪಸ್ಸನ್ನು ಭಂಗಗೊಳಿಸಲು ಬಂದ ಮನ್ಮಥನು ಶಿವನ ಮೂರನೇ ಕಣ್ಣಿನ ಜ್ವಾಲೆಗೆ ಸಿಲುಕಿ ಭಸ್ಮವಾದ ದಿನವಿದು. ನಂತರ ರತಿಯ ಪ್ರಾರ್ಥನೆಗೆ ಮೆಚ್ಚಿ ಶಿವನು ಮನ್ಮಥನನ್ನು ಪುನರುಜ್ಜೀವನಗೊಳಿಸುತ್ತಾನೆ. ಹಾಗಾಗಿ ಇದು ಪ್ರೀತಿ ಮತ್ತು ಸಮರ್ಪಣೆಯ ಹಬ್ಬವೂ ಹೌದು.
ಶ್ರೀಕೃಷ್ಣನು ತನ್ನ ಪ್ರಿಯತಮೆ ರಾಧೆ ಮತ್ತು ಗೋಪಿಕೆಯರೊಂದಿಗೆ ಬಣ್ಣಗಳನ್ನು ಎರಚುತ್ತಾ ಈ ಹಬ್ಬವನ್ನು ಸಂಭ್ರಮಿಸುತ್ತಿದ್ದನಂತೆ. ಅಂದಿನಿಂದ ಪರಸ್ಪರ ಬಣ್ಣ ಹಚ್ಚುವ ಮೂಲಕ ಸ್ನೇಹ, ಪ್ರೀತಿ ಮತ್ತು ಏಕತೆಯನ್ನು ಸಾರುವ ಸಂಪ್ರದಾಯ ಬೆಳೆದುಬಂದಿದೆ.



