ಹೊಸದಿಗಂತ ವರದಿ ಕಾರವಾರ:
ರಾಜಕೀಯದಲ್ಲಿ ಯಾರಿಗೂ ಅಧಿಕಾರ ಶಾಶ್ವತವಲ್ಲ ಅವಕಾಶಗಳು ಬರುತ್ತವೆ ಹೋಗುತ್ತವೆ ರಾಜಕಾರಣಿಗಳಿಗೆ ಜನಸೇವೆಯೇ ಮುಖ್ಯ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಅತಿವೃಷ್ಟಿ ಮತ್ತು ಬರ ಪರಿಸ್ಥಿತಿಯ ಪರಿಶೀಲನೆಗೆ ಜಿಲ್ಲೆಗೆ ಭೇಟಿ ನೀಡದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸಚಿವ ಸ್ಥಾನ ಸಿಗಲಿಲ್ಲ ಎಂದು ಉತ್ತರ ಕನ್ನಡ ಜಿಲ್ಲೆಯ ಯಾವುದೇ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ಇಲ್ಲ, ಮಾಜಿ ಸಚಿವ ಮಂಕಾಳ ವೈದ್ಯ ಸೇರಿದಂತೆ ಜಿಲ್ಲೆಯ ಶಾಸಕರು, ಕಾಂಗ್ರೆಸ್ ನಾಯಕರು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಒಂದಾಗಿ ಕೈಜೋಡಿಸಿ ಕೆಲಸ ಮಾಡಲಿದ್ದಾರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೂ ಸಚಿವರ ಪಟ್ಟಿಯಲ್ಲಿ ಮೊದಲು ತಮ್ಮ ಹೆಸರು ಇತ್ತು ಆಮೇಲೆ ಇರಲಿಲ್ಲ ಇದನ್ನೆಲ್ಲ ಸಹಜ ಎಂಬಂತೆ ಸ್ವೀಕರಿಸಿ ಮುನ್ನಡೆಯಬೇಕು ಎಂದು ಹೇಳಿದರು.
ಸಚಿವ ಸ್ಥಾನಕ್ಕೆ ಹಣ ಪಡೆಯಲಾಗುತ್ತಿದೆ ಎನ್ನುವ ಆಡಿಯೋ ಕುರಿತಂತೆ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಯಾರು ಆಡಿಯೋದಲ್ಲಿ ಮಾತನಾಡಿದ್ದಾರೆ ಅದರ ಸತ್ಯಾಸತ್ಯತೆಯ ಕುರಿತಂತೆ
ಅವರೇ ತಿಳಿಸಲಿ ತಪ್ಪಿತಸ್ಥರ ಮೇಲೆ ಪಕ್ಷ,ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿದಿರುವ ಕುರಿತಂತೆ ಬಿಜೆಪಿ ಹೋರಾಟ ನಡೆಸುವುದಾಗಿ ತಿಳಿಸಿದೆ, 25 ವರ್ಷಗಳ ಕಾಲ ಬಿಜೆಪಿಯನ್ನು ನೋಡಿದ್ದು ನಾಗೇಂದ್ರ ವಿಷಯದಲ್ಲಿ ಹೋರಾಟ ನಡೆಸಿದರೆ ಆ ಸಂದರ್ಭದಲ್ಲಿ ಅವರಿಗೆ ಉತ್ತರ ನೀಡುವುದಾಗಿ ಎಂದು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸೂಚನೆಯಂತೆ ರಾಜ್ಯದ ಎಲ್ಲಡೆ ಅತಿವೃಷ್ಟಿ ಮತ್ತು ಬರಪರಿಸ್ಥಿತಿಯ ಪರಿಶೀಲನೆ ನಡೆಸಿ ವರದಿ ಸಲ್ಲಿಸುವ ಜವಾಬ್ದಾರಿ ಸಚಿವರುಗಳಿಗೆ ನೀಡಲಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳ ಪರಿಸ್ಥಿತಿಯ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಕಾಳಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ ಸಚಿವ ಸವದಿ ಕೆಲಸದ ಪ್ರಗತಿಯ ಕುರಿತಂತೆ ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.



