ಹೊಸದಿಗಂತ ಕಲಬುರಗಿ:
ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಜ್ವಾಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿ ನೆಲೆಸಿರುವ ಜಿಲ್ಲೆಯ ನಿವಾಸಿಗಳ ಸುರಕ್ಷತೆಗಾಗಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಮಹತ್ವದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಯುದ್ಧ ಪೀಡಿತ ಪ್ರದೇಶಗಳಲ್ಲಿ ಕಲಬುರಗಿ ಸೇರಿದಂತೆ ರಾಜ್ಯದ ಅನೇಕರು ಸಿಲುಕಿಕೊಂಡಿರುವ ಮಾಹಿತಿ ಲಭ್ಯವಾಗಿದ್ದು, ಅವರ ನೆರವಿಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ಸಂಕಷ್ಟದಲ್ಲಿರುವವರು ಕೂಡಲೇ ಭಾರತೀಯ ರಾಯಭಾರ ಕಚೇರಿಗಳ ಸಂಪರ್ಕ ಸಾಧಿಸಬೇಕು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ‘ಸಾರಥಿ ಸಹಾಯತಾ’ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಡಿಸಿ ವಿನಂತಿಸಿದ್ದಾರೆ.
ಒಂದು ವೇಳೆ ಕಲಬುರಗಿ ಜಿಲ್ಲೆಯ ನಿವಾಸಿಗಳು ಯುದ್ಧ ಪೀಡಿತ ದೇಶಗಳಲ್ಲಿ ಸಿಲುಕಿದ್ದರೆ, ಅವರ ಕುಟುಂಬದವರು ಈ ಕೆಳಗಿನ ಸಂಖ್ಯೆಗಳಿಗೆ ಮಾಹಿತಿ ನೀಡಬಹುದಾಗಿದೆ:
ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ: 08472-278677
ಪೊಲೀಸ್ ನಿಯಂತ್ರಣ ಕೊಠಡಿ: 9480805500, 9480803500
ಇತರ ದೂರವಾಣಿ ಸಂಖ್ಯೆಗಳು: 08472-263604, 08472-228112
ಸಂಕಷ್ಟದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ನೆರವಾಗಲು ಸರ್ಕಾರ ಬದ್ಧವಾಗಿದ್ದು, ಸಾರ್ವಜನಿಕರು ಆತಂಕಪಡದೆ ಅಧಿಕೃತ ಸೂಚನೆಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



