ಹೊಸ ದಿಗಂತ ವರದಿ, ಕಲಬುರಗಿ:
ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಟಿಎಫ್ ಡಬ್ಲ್ಯೂ ೩೫ ಮಹಿಳಾ ಓಪನ್ ಟೆನಿಸ್ ಟೂರ್ನಮೆಂಟ್ ನ ಮುಖ್ಯ ಪಂದ್ಯಗಳಲ್ಲಿ ಭಾರತದ ೩ನೇ ಅಗ್ರ ರ್ಯಾಂಕಿಂಗ್ ವೈಷ್ಣವಿ ಅಡ್ಕರ್,ಭಾರತದ ಚೆವಿಕಾ ರೆಡ್ಡಿ ಸಾಮಾ ವಿರುದ್ಧ ಅದ್ವಿತೀಯ ಗೆಲುವಿನೊಂದಿಗೆ ೧೬ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಬಿಸಿಲಿನ ಶಾಖಗಳ ಮಧ್ಯೆಯೂ ಮಂಗಳವಾರ ಬೆಳಗ್ಗೆ ಪ್ರಾರಂಭವಾದ ಟೂರ್ನಿಯ ಪ್ರಧಾನ ಮುಖ್ಯ ಪಂದ್ಯಗಳಲ್ಲಿ,ಚೆವಿಕಾ ರೆಡ್ಡಿ ಸಾಮಾ ವಿರುದ್ಧ ೬-೦,೬-೩ ಅಂತರದಲ್ಲಿ ಗೆಲುವು ಸಾಧಿಸಿ, ಪ್ರೇಕ್ಷಕರ ಸಂಭ್ರಮಕ್ಕೆ ಸಾಕ್ಷಿಯಾದರು.
ಮಂಗಳವಾರ ನಡೆದ ಹಲವು ಸಿಂಗಲ್ಸ್ ಪಂದ್ಯಗಳಲ್ಲಿ ಥೈಲ್ಯಾಂಡ್,ನ ಅಂಚಿಸಾ ಚಾಂಟಾ ಅಲ್ಲಿಗ್ರಾ ಖಾರಫೆನ್ಸ್ ವಿರುದ್ಧ ೬-೨,೬-೦ ದಿಂದ ಜಯ ಸಾಧಿಸಿದರು.ಭಾರತದ ಅಮೋಧಿನಿ ನಾಯಕ್ ವಿರುದ್ಧ ಮಾಯನ್ ಲಾರೋನ್ ೬-೦,೬-೧ ಅಂತರದಲ್ಲಿ ಗೆಲುವು ಪಡೆದರು.ಯೆಕಾತ್ರಿನಾ ಯಶೀನಾ ವಿರುದ್ಧ ಸೋಫಿಯಾ ಸಸ್ಲೋವಾ ೬-೪,೬-೭(೩),೬-೩ ಅಂತರದಲ್ಲಿ ಗೆಲುವು ಪಡೆದಿದ್ದು, ಅದರಂತೆ ಮಿಲಾನಾ ಮಸ್ಲೆಂಕೋವಾ ಅನಸ್ಥಾಷಿಯಾ ಕೂಪ್ರೇವ್ ವಿರುದ್ಧ ೬-೨,೭-೫ ಅಂತರದಲ್ಲಿ ಗೆಲುವಿನ ನಗೆ ಬೀರಿದರು.ಇದರ ಮಧ್ಯೆ ದಿನದ ಕೊನಯ ಸಿಂಗಲ್ಸ್ ಪಂದ್ಯದಲ್ಲಿ ಜಪಾನಿನ ಅಗ್ರ ೭ನೇ ರ್ಯಾಂಕಿಂಗ್ ಮಿಚಿಕಾ ವೋಝೇಕಿ ವಿರುದ್ಧ ಭಾರತದ ಲಕ್ಷ್ಮೀಸಿರಿ ದಂಡು ಪ್ರಭಲ ಪೈಪೋಟಿ ನೀಡಿ ಮೊದಲ ಸೆಟ್ ನಲ್ಲಿ ಗೆಲುವು ಸಾಧಿಸಿದರು ನಂತರದಲ್ಲಿ ೪-೬,೬-೧,೬-೧ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಗದೇ ನಿರಾಸೆಗೊಂಡರು.



