ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಕುರಿತು ರಾಷ್ಟ್ರಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ತಮಿಳುನಾಡು ಸರ್ಕಾರವು ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ರಚಿಸಿದ್ದ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಬೆಂಬಲಿಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಸಿದ್ದರಾಮಯ್ಯ ಅವರು, ‘ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತವನ್ನು ‘ರಾಜ್ಯಗಳ ಒಕ್ಕೂಟ’ ಎಂದು ಕರೆದಿದ್ದರು. ಇದು ಕೇವಲ ಆಡಳಿತಾತ್ಮಕ ಅನುಕೂಲಕ್ಕಾಗಿ ಮಾಡಿದ ವ್ಯವಸ್ಥೆಯಲ್ಲ, ಬದಲಿಗೆ ಅಧಿಕಾರ ಒಂದೇ ಕಡೆ ಕೇಂದ್ರೀಕೃತವಾಗಬಾರದು ಎಂಬ ಸಾಂವಿಧಾನಿಕ ಭರವಸೆಯಾಗಿತ್ತು. ಆದರೆ, ಕಳೆದ ಕೆಲವು ದಶಕಗಳಿಂದ ಅಧಿಕಾರವು ಕೇಂದ್ರದತ್ತ ವಾಲಿರುವುದು ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ಹದಗೆಡಿಸಿದೆ’ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವು ಸಮವರ್ತಿ ಪಟ್ಟಿಯನ್ನು ತನ್ನ ಇಚ್ಛೆಯಂತೆ ವ್ಯಾಖ್ಯಾನಿಸುತ್ತಿದೆ ಮತ್ತು ರಾಜ್ಯಪಾಲರ ಒಪ್ಪಿಗೆಯ ಪ್ರಕ್ರಿಯೆಗಳಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಇದರಿಂದಾಗಿ ಭಾರತದ ‘ಸಹಕಾರ ಒಕ್ಕೂಟ ವ್ಯವಸ್ಥೆ’ ಈಗ ‘ಬಲಾತ್ಕಾರದ ಒಕ್ಕೂಟ ವ್ಯವಸ್ಥೆ’ಯಾಗಿ ಬದಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಣಕಾಸು ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕಾರ ಮತ್ತು ಜವಾಬ್ದಾರಿಗಳು ಸಮಾನವಾಗಿರಬೇಕು. ಆದರೆ, 280ನೇ ವಿಧಿಯಡಿ ಹಣಕಾಸು ಆಯೋಗದ ಪಾತ್ರ ಮತ್ತು ಜಿಎಸ್‌ಟಿ (GST) ಚೌಕಟ್ಟು ರಾಜ್ಯಗಳ ಆರ್ಥಿಕ ಸಾರ್ವಭೌಮತ್ವವನ್ನು ದುರ್ಬಲಗೊಳಿಸುತ್ತಿವೆ. ರಾಜ್ಯಗಳು ಕೇವಲ ಕೇಂದ್ರದ ಅನುದಾನದ ಮೇಲೆ ಅವಲಂಬಿತವಾಗುವಂತೆ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಪಾಯಕಾರಿ’ ಎಂದು ತಿಳಿಸಿದ್ದಾರೆ.
ಸಹಕಾರ, ಸಮನ್ವಯದ ಫೆಡರಲಿಸಂ, ಸಾಂವಿಧಾನಿಕ ನಂಬಿಕೆ ಮತ್ತು ವೈವಿಧ್ಯತೆಯ ಗೌರವ ದಲ್ಲಿ ಭಾರತದ ಶಕ್ತಿ ಅಡಗಿದೆ. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳೊಂದಿಗೆ ಮಾತುಕತೆ ಮತ್ತು ಹೊಂದಾಣಿಕೆಯನ್ನು ಪುನರ್ ಸ್ಥಾಪಿಸಲು ಅಂತರ-ರಾಜ್ಯ ಮಂಡಳಿಯಂತಹ ಸಾಂಸ್ಥಿಕ ವೇದಿಕೆಯನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.



