ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಂಖೆಡೆಯಲ್ಲಿ ಕೊನೆಗೂ ಮುಂಬೈ ಅಭಿಮಾನಿಗಳಿಗೆ ಪಾಂಡ್ಯ ಪಡೆ ಸಿಕ್ಸರ್ ಗಳ ರಸದೌತಣ ನೀಡಿದ್ದು, ರಯಾನ್ ರಿಕಲ್ಟನ್ ಭರ್ಜರಿ ಶತಕದಾಟದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 243 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಮುಂಬೈಗೆ ಉತ್ತಮ ಆರಂಭ ಸಿಕ್ಕಿತ್ತು. ವಿಲ್ ಜಾಕ್ಸ್ ಹಾಗೂ ರಿಕಲ್ಟನ್ 93 ರನ್ಗಳ ಜೊತೆಯಾಟ ನೀಡಿದರು. ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಿದ ವಿಲ್ ಜಾಕ್ಸ್ 46 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ಸೂರ್ಯಕುಮಾರ್ ಯಾದವ್ ಕೇವಲ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ನಂತರ ನಮನ್ ಧೀರ್ ರಿಕಲ್ಟನ್ ಜೊತೆಗೂಡಿ 55 ರನ್ಗಳ ಜೊತೆಯಾಟ ನೀಡಿದರು. ನಮನ್ 22 ರನ್ಗಳಿಸಿ ಕ್ಯಾಚ್ ನೀಡಿದರು. ನಾಯಕ ಹಾರ್ದಿಕ್ ಪಾಂಡ್ಯ 31 ರನ್ಗಳಿಸಿ ಉತ್ತಮ ಸಾಥ್ ನೀಡಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೆ, ಅತ್ತ ಆರಂಭಿಕನಾಗಿ ಬಂದ ರಿಕಲ್ಟನ್ 55 ಎಸೆತಗಳಲ್ಲಿ 10 ಬೌಂಡರಿ, 8ಸಿಕ್ಸರ್ಗಳ ಸಹಿತ ಅಜೇಯ 123 ರನ್ಗಳಿಸಿ , ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.



