ಹೊಸದಿಗಂತ ಬೆಳಗಾವಿ:
ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ಎಂಇಎಸ್ (MES) ಕಾರ್ಯಕರ್ತರು, ಈ ಬಾರಿಯ ಹೋಳಿ ಹಬ್ಬದ ಆಚರಣೆಯಲ್ಲೂ ತಮ್ಮ ಉದ್ಧಟತನ ಮೆರೆಯುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಬೆಳಗಾವಿ ನಗರದ ಅನಗೋಳದ ರಾಜಹಂಸ ಗಲ್ಲಿಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಬಣ್ಣದ ಆಟದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂಭ್ರಮದ ನಡುವೆಯೇ ಕೆಲ ಯುವಕರು ‘ಜೈ ಮಹಾರಾಷ್ಟ್ರ’ ಎಂಬ ಪೋಸ್ಟರ್‌ಗಳನ್ನು ಪ್ರದರ್ಶಿಸಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆಗಳನ್ನು ಕೂಗಿದ್ದಾರೆ. ಅಷ್ಟೇ ಅಲ್ಲದೆ, ಸಾರ್ವಜನಿಕವಾಗಿ ಮಹಾರಾಷ್ಟ್ರದ ನಾಡಗೀತೆಯನ್ನು ಪ್ರಸಾರ ಮಾಡಿ ಅದಕ್ಕೆ ಕುಣಿದು ಕುಪ್ಪಳಿಸುವ ಮೂಲಕ ಪ್ರಚೋದನಕಾರಿ ವರ್ತನೆ ತೋರಿದ್ದಾರೆ.
ಕರ್ನಾಟಕದ ನೆಲದಲ್ಲಿ ನಿಂತು ನೆರೆ ರಾಜ್ಯದ ಪರ ಜೈಕಾರ ಹಾಕಿದ ಈ ಘಟನೆ ಕನ್ನಡಿಗರನ್ನು ಕೆರಳಿಸಿದೆ. ಗಡಿ ಭಾಗದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕನ್ನಡಪರ ಸಂಘಟನೆಗಳು ತೀವ್ರವಾಗಿ ಒತ್ತಾಯಿಸಿವೆ.
ಈ ಘಟನೆಯು ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈಗಾಗಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೋಳಿ ಹಬ್ಬದ ಆಯೋಜಕರು ಹಾಗೂ ಪ್ರಚೋದನಕಾರಿ ಹಾಡು ಹಚ್ಚಿದವರನ್ನು ಪತ್ತೆ ಹಚ್ಚಲಾಗುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.



