ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಹೆಮ್ಮೆಯ ಜಾನಪದ ಗಾಯಕಿ, ಪದ್ಮವಿಭೂಷಣ ಪುರಸ್ಕೃತೆ ತೀಜನ ಬಾಯಿ ದೀರ್ಘಕಾಲದ ಅನಾರೋಗ್ಯದ ಬಳಿಕ ಇಂದು ಭಾನುವಾರ ಮುಂಜಾನೆ ನಿಧನರಾಗಿದ್ದಾರೆ.
ಛತ್ತೀಸ್‌ಗಢದ ಸಾಂಪ್ರದಾಯಿಕ ‘ಪಾಂಡವಾನಿ’ ಜಾನಪದ ಕಲಾ ಪ್ರಕಾರವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿದ್ದ ಅವರಿಗೆ 70 ವರ್ಷ ವಯಸ್ಸಾಗಿತ್ತು. ರಾಯ್‌ಪುರದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮುಂಜಾನೆ 3:15 ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕಲಾ ಲೋಕದ ಧ್ರುವತಾರೆ ತೀಜನ ಬಾಯಿ
ತೀಜನ ಬಾಯಿ ನಿಧನವು ಭಾರತೀಯ ಸಾಂಸ್ಕೃತಿಕ ಮತ್ತು ಜಾನಪದ ರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಮಹಾಭಾರತದ ಕಥೆಗಳನ್ನು ವಿಶಿಷ್ಟ ಶೈಲಿಯಲ್ಲಿ ಹಾಡುತ್ತಾ, ನಟಿಸುತ್ತಾ ಸಾರುವ ಛತ್ತೀಸ್‌ಗಢದ ಜಾನಪದ ಕಲೆ ‘ಪಾಂಡವಾನಿ’ಯನ್ನು ಇವರು ಅಂತಾರಾಷ್ಟ್ರೀಯ ವೇದಿಕೆಗಳಿಗೆ ಕೊಂಡೊಯ್ದಿದ್ದರು.
ಕಲಾಕ್ಷೇತ್ರಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ (1988), ಪದ್ಮಭೂಷಣ (2003) ಮತ್ತು ಪದ್ಮವಿಭೂಷಣ (2019) ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಕೇವಲ 13ನೇ ವಯಸ್ಸಿನಲ್ಲಿಯೇ ಈ ಕಲೆಯನ್ನು ಆರಂಭಿಸಿದ್ದ ಇವರು, ಅಂದಿನ ಕಾಲದಲ್ಲಿ ಮಹಿಳೆಯೊಬ್ಬರು ಪಾಂಡವಾನಿ ಹಾಡುವುದನ್ನು ವಿರೋಧಿಸಿದ ಸಮಾಜದ ಸವಾಲುಗಳನ್ನು ಮೆಟ್ಟಿ ನಿಂತು ಮಹಾನ್ ಸಾಧಕಿಯಾಗಿ ಬೆಳೆದಿದ್ದರು.
ಇದನ್ನೂ ಓದಿ:
ಪ್ರಧಾನಿ ಮೋದಿ ಹಾಗೂ ಗಣ್ಯರ ಸಂತಾಪ
ತೀಜನ ಬಾಯಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.



